ಶಿವಮೊಗ್ಗದಿಂದ ಅಯೋಧ್ಯೆ, ಕಾಶಿಗೆ 1500 ಯಾತ್ರಿಗಳನ್ನು ಕರೆದೊಯ್ದ ವಿಶೇಷ ರೈಲು

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಿಂದ ಅಯೋಧ್ಯೆ, ಕಾಶಿಗೆ ಸುಮಾರು‌ 1,500 ಯಾತ್ರಿಗಳನ್ನು ಹೊತ್ತ ವಿಶೇಷ ರೈಲು ಇಂದು ಬೆಳಗ್ಗೆ ಪ್ರಯಾಣ ಪ್ರಾರಂಭಿಸಿದೆ. ಮಾಜಿ ಡಿಸಿಎಂ ಕೆ. ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಯಾತ್ರಿಗಳು ಅಯೋಧ್ಯೆ ಹಾಗೂ ಕಾಶಿಗೆ ಹೊರಟಿದ್ದಾರೆ.

ಇಂದು ಪ್ರಯಾಣ ಪ್ರಾರಂಭಿಸಿದ ವಿಶೇಷ ರೈಲು ಎರಡು ದಿನ ನಿರಂತರ ಸಂಚಾರ ನಡೆಸಿ, ಅಯೋಧ್ಯೆ ತಲುಪಲಿದೆ. ಅಯೋಧ್ಯೆಯಲ್ಲಿ ಬಾಲ ರಾಮನ ದರ್ಶನದ ನಂತರ ಇದೇ ರೈಲು ಕಾಶಿಗೆ ಹೊರಡಲಿದೆ. ಕಾಶಿಯ ವಿಶ್ವನಾಥನ ದರ್ಶನದ ನಂತರ ಪುನಃ ಇದೇ ವಿಶೇಷ ರೈಲು ಶಿವಮೊಗ್ಗಕ್ಕೆ ಒಂದು ವಾರದ ನಂತರ ಆಗಮಿಸಲಿದೆ.

ಬೆಕ್ಕಿನ ಕಲ್ಮಠದ ಶ್ರೀ ಮುರುಘಾರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಮರುಳಸಿದ್ದ ಸ್ವಾಮೀಜಿ, ಶಿಕಾರಿಪುರದ ತೊಗರ್ಸಿಯ ಶ್ರೀ ಹಾಗೂ ಕೋಣಂದೂರು ಶ್ರೀಗಳು ಕೆ. ಎಸ್. ಈಶ್ವರಪ್ಪ ಜೊತೆ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದರು.

ರೈಲು ಶಿವಮೊಗ್ಗ ನಿಲ್ದಾಣದಿಂದ ಬೆಳಗ್ಗೆ 6.40ಕ್ಕೆ ಹೊರಟಿತು. ಬಿರೂರು ಜಂಕ್ಷನ್​ನಿಂದ ದಾವಣಗೆರೆ, ಹರಿಹರ ಮಾರ್ಗವಾಗಿ ರೈಲು ಚಲಿಸಲಿದೆ. ಈ ರೈಲಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಯಾತ್ರಾರ್ಥಿಗಳನ್ನು ಬೀಳ್ಕೊಡಲು ಅವರ ಸಂಬಂಧಿಕರು ಆಗಮಿಸಿದ್ದರು. ಈ ರೈಲಿನಲ್ಲಿ ಕೆ. ಎಸ್. ಈಶ್ವರಪ್ಪ ಅವರ ಕುಟುಂಬ ಸಹ ಪ್ರಯಾಣ ಬೆಳೆಸಿದೆ.

“ನಮ್ಮ ಯಾತ್ರೆ ಇಂದು ಪ್ರಾರಂಭವಾಗಿದ್ದು, ಒಂದು ವಾರ ನಡೆಯಲಿದೆ. ಇಂದಿನಿಂದ ಸತತ ಎರಡು ದಿನ ನಮ್ಮ ಪ್ರಯಾಣ ಅಯೋಧ್ಯೆಯ ತನಕ ಸಾಗಲಿದೆ. ಅಯೋಧ್ಯೆಯ ನಂತರ ಕಾಶಿಗೆ ಪ್ರಯಾಣ ಮಾಡಲಿದ್ದೇವೆ. ಕಾಶಿಯಿಂದ ಪುನಃ ಸತತ ಎರಡು ದಿನಗಳ ಪ್ರಯಾಣದ ನಂತರ ಶಿವಮೊಗ್ಗ ತಲುಪಲಿದ್ದೇವೆ. ಪ್ರಯಾಣಕ್ಕೆ ಎಲ್ಲಾ ಸಿದ್ಧತೆ ಮಾಡಿದ್ದೇವೆ. ನಮ್ಮ ಯಾತ್ರೆಗೆ ಸಹಕರಿಸಿದ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ರೈಲ್ವೆ ಸಿಬ್ಬಂದಿಗೆ ಅಭಿನಂದನೆ” ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.