ಬೆಂಗಳೂರು / ಜೆರುಸಲೇಂ: ಮುಸ್ಲಿಮರ ಪವಿತ್ರ ಹಜ್ ಯಾತ್ರೆ ವೇಳೆ ಮೆಕ್ಕಾದಲ್ಲಿ ದಾಖಲಾದ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ ಮೃತಪಟ್ಟ 645 ಹಜ್ ಯಾತ್ರಾರ್ತಿಗಳ ಪೈಕಿ 90 ಮಂದಿ ಭಾರತೀಯರು ಸಾವನ್ನಪ್ಪಿದ್ದಾರೆ. ಇದರಲ್ಲಿ ಬೆಂಗಳೂರಿನ ಇಬ್ಬರು ಮೃತಪಟ್ಟಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮೃತರು ಬಕ್ರೀದ್ ಹಬ್ಬದ ಹಿನ್ನೆಲೆ ಹಜ್ ಯಾತ್ರೆ ಕೈಗೊಂಡಿದ್ದರು.
ಮೆಕ್ಕಾಗಿಂತ 8 ಕಿಲೋಮೀಟರ್ ದೂರದ ಮೀನಾ ನಗರದಲ್ಲಿ ಬೆಂಗಳೂರಿನ ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಆರ್.ಟಿ ನಗರದ ಕೌಸರ್ ರುಕ್ಸಾನ (69) ಮತ್ತು ಫ್ರೆಝರ್ ಟೌನ್‌ನ ಮೊಹಮ್ಮದ್ ಇಲಿಯಾಸ್ (50) ಎಂದು ಗುರುತಿಸಲಾಗಿದೆ. ಮೆಕ್ಕಾದಲ್ಲೇ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿದ್ದು, ಕರ್ನಾಟಕದ ಉಳಿದ ಯಾತ್ರಿಕರು ಸೇಫ್ ಆಗಿದ್ದಾರೆ ಎಂದು ಹಜ್ ಕಮಿಟಿ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಾರಿ ಕರ್ನಾಟಕದಿಂದ 10,300 ಮಂದಿ ಹಜ್ ಯಾತ್ರೆಗೆ ತೆರಳಿದ್ದರು. ಇವರೊಂದಿಗೆ ರುಕ್ಸಾನ ಸಹ ತಮ್ಮ ಕುಟುಂಬದ ಜೊತೆಗೆ ಹಜ್ ಯಾತ್ರೆಗೆ ತೆರಳಿದ್ದರು ಎಂದು ಸರ್ಫರಾಜ್ ಖಾನ್ ತಿಳಿಸಿದ್ದಾರೆ.
ಮರಣ ಸಂಖ್ಯೆ ಹೆಚ್ಚಿದ್ದು ಏಕೆ?
ಪ್ರತಿ ವರ್ಷದಂತೆ ಈ ವರ್ಷವೂ ಲಕ್ಷಾಂತರ ಮಂದಿ ಯಾತ್ರಿಕರು ಹಜ್ ಯಾತ್ರೆ ಹಮ್ಮಿಕೊಂಡಿದ್ದರು. ವಿವಿಧ ದೇಶಗಳಿಂದ ಸುಮಾರು 16 ಲಕ್ಷ ಯಾತ್ರಿಕರು ಬಂದಿದ್ದರು. ಈ ವೇಳೆ ಮಿತಿಮೀರಿದ ತಾಪಮಾನ ಏರಿಕೆಯಿಂದ 645 ಮಂದಿ ಯಾತ್ರಿಕರು ಮೃತಪಟ್ಟಿದ್ದು, 2700ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನೋಂದಣಿ ಮಾಡಿಕೊಳ್ಳದೇ ಹಜ್ ಯಾತ್ರೆಗೆ ಬರುವವರಿಗೆ ಸೂಕ್ತ ಎಸಿ ಸೌಲಭ್ಯ ಇರುವುದಿಲ್ಲ, ಸೂರು ಸಿಗುವುದಿಲ್ಲ. ಈ ಕಾರಣದಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.
ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು, ಕನಿಷ್ಠ 60 ಮಂದಿ ಜೋರ್ಡಾನಿಯನ್ನರು, ವಿವಿಧ ದೇಶಗಳ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತ ದೇಹಗಳನ್ನು ಮೆಕ್ಕಾದ ಅಲ್-ಮುಯಿಸೆಮ್ ನೆರೆಹೊರೆಯಲ್ಲಿರುವ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. 2023ರ ಹಜ್ ಯಾತ್ರೆ ಸಂದರ್ಭದಲ್ಲಿ ವಿವಿಧ ದೇಶಗಳ ಕನಿಷ್ಠ 240 ಯಾತ್ರಿಕರು ಸಾವನ್ನಪ್ಪಿದ್ದರು ಎಂದು ಅರಬ್ ರಾಜತಾಂತ್ರಿಕರು ತಿಳಿಸಿದ್ದಾರೆ.
ಏನಿದು ಹಜ್ ಯಾತ್ರೆ?
ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆ ನಡೆಯುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ. ಬಕ್ರೀದ್ ಮುನ್ನಾದಿನ ಅಥವಾ ‘ದುಲ್ ಹಜ್’ ತಿಂಗಳ ಒಂಬತ್ತರಂದು ಹಜ್ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ.