ಬೆಂಗಳೂರು, (ಜೂನ್.18): ಮಂತ್ರಾಲಯದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕರ್ನಾಟಕ ಭವನದ ಕಾಮಗಾರಿ ಕಳಪೆಯಾಗಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಲೋಕಾಯುಕ್ತರಿಗೆ ನೀಡಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಆದೇಶಿದ್ದಾರೆ. ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಪ್ರಕರಣವನ್ನು ಲೋಕಾಯುಕ್ತರವರಿಗೆ ವಹಿಸಲು ಆದೇಶಿಸಿದೆ ಎಂದು ಸಚಿವ ರಾಮಲಿಂಗ ರೆಡ್ಡಿ ಅವರು ಕಂದಾಯ ಇಲಾಖೆ ಮುಜರಾಯಿ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.
ಕರ್ನಾಟಕದಿಂದ ಮಂತ್ರಾಲಯಕ್ಕೆ ಹೋಗುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ 100 ಕೊಠಡಿಗಳ ಅತಿಥಿಗೃಹ ನಿರ್ಮಾಣ ಮಾಡಲು 5 ಕೋಟಿ ರೂ.ಗಳನ್ನು 2010ರಲ್ಲಿ ಮಂಜೂರು ಮಾಡಲಾಗಿತ್ತು. ಈ ವೆಚ್ಚದಲ್ಲಿ 2019ರಲ್ಲಿ 100 ಕೊಠಡಿಗಳ ಕರ್ನಾಟಕ ಭವನ (ಛತ್ರ) ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಗಿತ್ತು. ಆದ್ರೆ, ಕಾಮಗಾರಿಯಲ್ಲಿ ಕಳಪೆಯಾಗಿದೆ ಎಂದು ಆರೋಪ ಕೇಳಿಬಂದಿದೆ. ಗೋಡೆಗಳು ಬಿರುಕು ಮೂಡಿದ್ದು, ಕೊಠಡಿಗಳಲ್ಲಿ ನೀರು ಸೋರಿಕೆ, ವಿದ್ಯುತ್ ಸಂಪರ್ಕದ ಅವ್ಯವಸ್ಥೆ, ಚರಂಡಿಗೆ ಸಂಪರ್ಕ ಕಲ್ಪಿಸಿದ ಪೈಪ್‌ಗಳ ಸೋರಿಕೆ, ಕಟ್ಟಡಕ್ಕೆ ಅಳವಡಿಸಿದ ಟೈಲ್ಸ್ ಗಳು ತುಂಬಾ ಹಾನಿಗೊಳಗಾಗಿದೆ, ಬಿಸಿ ನೀರಿಗೆ ಅಳವಡಿಸಿದ ಗೀಸರ್‌ಗಳು ಕಾರ್ಯನಿರ್ವಹಿಸುತ್ತಿರುವುದಿಲ್ಲ.
ಅಲ್ಲದೇ ಪ್ರತಿಯೊಂದು ಕೊಠಡಿಗಳ ಡೋರ್, ಕಿಟಕಿ, ಪೀಟೋಪಕರಣಗಳು ಕಳಪೆ ಗುಣಮಟ್ಟದ್ದಾಗಿರುವುದಾಗಿ ಆರೋಪವಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಎಂದು ವರದಿ ಮೂಲಕ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತಕ್ರಮ ಹಾಗೂ ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲು ಪ್ರಕರಣವನ್ನು ಲೋಕಾಯುಕ್ತರವರಿಗೆ ವಹಿಸಿ ಸಚಿವ ರಾಮಲಿಂಗ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಸಚಿವ ರಾಮಲಿಂಗ ರೆಡ್ಡಿ ಅವರು ಕಂದಾಯ ಇಲಾಖೆ ಮುಜರಾಯಿ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿಗೂ ಪತ್ರ ಬರೆದಿದ್ದಾರೆ.