ತಾಯಿ ಮತ್ತು ಮಗು ಆರೋಗ್ಯ ಕಾಪಾಡಲು ಕೇರ್‌ ಕಂಪೆನಿಯನ್‌ ಸಹಕಾರಿ-ಡಾ.ಭಟ್

ಹೊನ್ನಾವರ ಜುಲೈ 01 : ಅಭಿಯಾನ, ನೂರಾ ಹೆಲ್ತ್, ಯೋಶೇಟ್ ಪೌಂಡೇಶನ್, ಆರೋಗ್ಯ ಇಲಾಖೆ ಮತ್ತು ಹೊನ್ನಾವರ ತಾಲೂಕ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ತಾಲೂಕ ಆಸ್ಪತ್ರೆಯಲ್ಲಿ ‘ಕೇರ್ ಕಂಪೆನಿಯನ್’ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಯದೇವ ಹೃದೋಗ ಆಸತ್ರೆಯ ಕಾರ್ಡಿಯಾಕ್ ಸರ್ಜನ್ ಹಾಗೂ ಕೇರ್ ಕಂಪೆನಿಯನ್ ಎಡ್ವೈಸರ್ ಡಾ.ಆನಂದ ಭಟ್ಟ ಮಾತನಾಡಿ, ‘ಕೇರ್ ಕಂಪೆನಿಯನ್’ ವಿನೂತನ ಕಾರ್ಯಕ್ರಮ ಆಗಿದ್ದು, ತಾಯಿ ಮಗು ಮತ್ತು ಇತರೆ ರೋಗಿಗಳ ಆರೈಕೆ ಮಾಡುವ ಕುಟುಂಬ ಸದಸ್ಯರಿಗೆ ಸರಿಯಾದ ಮಾಹಿತಿ ನೀಡುವುದರ ಮೂಲಕ ಆರೋಗ್ಯ ಸೇವೆ ಉತ್ತಮಗೊಳಿಸುವುದಾಗಿದೆ ಎಂದರು.

ಆಸ್ಪತ್ರೆಯಲ್ಲಿನ ಚಿಕಿತ್ಸೆ ನಂತರ ಮನೆಯಲ್ಲಿ ತಾಯಿ ಮಗುವಿನ ಮತ್ತು ರೋಗಿಗಳಿಗೆ ಸರಿಯಾದ ಆರೈಕೆಯ ಅವಶ್ಯಕತೆ ಇರುತ್ತದೆ. ಇದರ ಬಗ್ಗೆ ಆರೈಕೆ ಮಾಡುವವರಿಗೆ ಸರಿಯಾದ ವೈಜ್ಞಾನಿಕವಾದ ಮಾಹಿತಿ ಅವಶ್ಯಕತೆ ಇರಲಿದೆ. ಸರಿಯಾದ ಮಾಹಿತಿ ಇಲ್ಲದೇ ಆರೈಕೆ ಮಾಡುವುದರಿಂದ ತಾಯಿ- ಮಗುವಿನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಲಿವೆ. ಇದರಿಂದ ಪುನಃ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಗಳು ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಮತ್ತು ಸಂಘ ಸಂಸ್ಥೆಗಳ ನೆರವಿನಿಂದ ಕೇರ್ ಕಂಪೆನಿಯನ್ ವಿನೂತನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ರು..

ಇದಕ್ಕಾಗಿ ಈಗಾಗಲೇ ಹೊನ್ನಾವರ ಆಸ್ಪತ್ರೆಯ ಮೂವರು ಶುಶ್ರೂಷಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿರುವ ತಾಯಿ ಮಗು ಮತ್ತು ಇತರೆ ರೋಗಿಗಳ ಆರೈಕೆ ಮಾಡುವವರಿಗೆ ಮನೆಯಲ್ಲಿ ಆರೈಕೆ ಮಾಡುವ ಬಗ್ಗೆ ಬೆಂಗಳೂರಿನಲ್ಲಿ ಆಪ್ತ ಸಮಾಲೋಚನೆ ತರಬೇತಿ ನೀಡಲಾಗಿದೆ. ಆಸ್ಪತ್ರೆಯಲ್ಲಿದ್ದಾಗ ಪಡೆದುಕೊಳ್ಳುವ ಚಿಕಿತ್ಸೆ ಎಷ್ಟು ಮುಖ್ಯವೋ ಅಷ್ಟೇ ಮನೆಯಲ್ಲಿದ್ದಾಗ ಅವರ ಆರೈಕೆ ಮಾಡುವುದು ಮುಖ್ಯವಾಗಲಿದೆ ಎಂದರು.

ಈ ವೇಳೆ ಹೊನ್ನಾವರ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜೇಶ ಕಿಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಮಾತನಾಡಿ, ಇವತ್ತಿನ ದಿನಗಳಲ್ಲಿ ಕೇರ್ ಕಂಪೆನಿಯನ್ ಕಾರ್ಯಕ್ರಮ ತುಂಬಾ ಅವಶ್ಯವಾಗಿದೆ ಎಂದರು. ಕಾರ್ಯ ಕ್ರಮದಲ್ಲಿ ಎಲ್ಲ ವೈದ್ಯರು, ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು. ಮಂಗಲಾನಾಯ್ಕ ವಂದಿಸಿದರು..