ಹೊನ್ನಾವರ ಜೂನ್ 25 : ಈ ವರ್ಷದ ಮೊದಲ ಅಂಗಾರಕ ಸಂಕಷ್ಟಿಗೆ ಪ್ರಸಿದ್ಧ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು. ಬೆಳಗ್ಗೆಯಿಂದಲೇ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತಾಧಿಗಳು, ಮೋದಕ ಪ್ರಿಯನ ದರ್ಶನ ಪಡೆದು ಪೂಜೆ ಸಲ್ಲಿಸಿದ್ರು…
ಒಂದು ಕಡೆ ರಸ್ತೆಯುದ್ದಕ್ಕೂ ಸರತಿ ಸಾಲಿನಲ್ಲಿ ನಿಂತಿರುವ ಜನರು.. ಇನ್ನೊಂದು ಕಡೆ ದೇವಸ್ಥಾನದಲ್ಲಿ ಕಿಕ್ಕಿರಿದು ತುಂಬಿರುವ ಭಕ್ತರು.. ಮತ್ತೊಂದು ಕಡೆ ಸರ್ವಾಲಂಕೃತವಾಗಿ ಕಂಗೋಳಿಸುತ್ತಿರುವ ಬಾಲ ವಿನಾಯಕನ.. ಈ ದೃಶ್ಯಗಳು ಕಂಡುಬಂದಿದ್ದು ನಮ್ಮ ಹೊನ್ನಾವರ ತಾಲೂಕಿನ ಸುಪ್ರಸಿದ್ಧ ಇಡಗುಂಜಿ ಮಹಾಗಣಪತಿ ಕ್ಷೇತ್ರದಲ್ಲಿ..
ಮಂಗಳವಾರ ಬರುವ ಸಂಕಷ್ಟಿ ಚತುರ್ಥಿಯನ್ನೇ ಅಂಗಾರಕ ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಈ ದಿನ ಭಗವಾನ್ ಗಣೇಶನು ಮಂಗಳನಿಗೆ ವಿಮೋಚನೆಯನ್ನು ನೀಡಿದನೆಂದು ಹಿಂದೂ ಧರ್ಮಗ್ರಂಥದಲ್ಲಿ ಹೇಳಾಗಿದೆ. ಹೀಗಾಗಿ ಈ ದಿನದಂದು ಉಪವಾಸ ಮಾಡುವ ವ್ಯಕ್ತಿಯು ಗಣೇಶ ಮತ್ತು ಮಂಗಳನ ಆಶೀರ್ವಾದವನ್ನು ಪಡೆಯುತ್ತಾನೆ. ಹೀಗಾಗಿ ಅಂಗಾರಕ ಸಂಕಷ್ಟಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತೆ.
ಅಂಗಾರಕ ಸಂಕಷ್ಟಿಯ ಅಂಗವಾಗಿ ಇಡಗುಂಜಿ ಮಹಾಗಣಪತಿ ದೇವಸ್ಥಾನಕ್ಕೆ ಮುಂಜಾನೆಯಿಂದಲೆ ಭಕ್ತರು ಸಾಗರೋಪಾದಿಯಲ್ಲಿ ಬಂದು ವಿಘ್ನನವಿನಾಷಕನ ದರ್ಶನ ಪಡೆದ್ರು… ನಾಡಿನ ವಿವಿಧೆಡೆಯಿಂದ ಸಹಸ್ರಾರು ಭಕ್ತರು ಹಣ್ಣು-ಕಾಯಿ, ಪಂಚಕಜ್ಜಾಯ, ಗಣಹೋಮ, ಕುಂಕುಮಾರ್ಚನೆ, ಬಾಳೆಗೊನೆ ಸೇವೆ, ಅಭಿಷೇಕ, ಸತ್ಯನಾರಾಯಣ ವೃತ ಸತ್ಯಗಣಪತಿ ವ್ರತ ಇತ್ಯಾದಿ ಸೇವೆ ಸಲ್ಲಿಸಿ ಹರಕೆ ಸಲ್ಲಿಸಿದರು. ಅಂಗಾರಕ ಸಂಕಷ್ಠಿ ಹಿನ್ನಲೆಯಲ್ಲಿ ದೇವಾಲಯದಲ್ಲಿ ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಈ ವೇಳೆ ಇಡಗುಂಜಿ ದೇವಸ್ಥಾನದ ಪ್ರಧಾನ ಅರ್ಚಕರಾದ ಮಂಜುನಾಥ್ ಭಟ್ಟರು ಮಾತನಾಡಿ, ಜಗತ್ತಿನ ಏಕೈಕ ಬಾಲಗಣಪತಿಯ ಕ್ಷೇತ್ರವಾಗಿರುವ ಇಡಗುಂಜಿಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಬಂದು ಭಕ್ತರು, ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದ್ರು…
ಬಳಿಕ ಮತ್ತೋರ್ವ ಅರ್ಚಕರಾದ ನರಸಿಂಹ ಭಟ್ಟರು ಮಾತನಾಡಿ, ಈ ಸಂವತ್ಸರದ ಮೊದಲನೇ ಅಂಗಾರಕ ಸಂಕಷ್ಟಿ ಇದಾಗಿದ್ದು, ಈ ದಿನ ಗಣೇಶನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರೆ, ಜೀವನದಲ್ಲಿನ ಸಂಕಷ್ಟ ನಿವಾರಣೆಯಾಗುತ್ತದೆ ಎಂದು ಹೇಳಿದ್ರು…
ಇನ್ನು ಬೆಳಗ್ಗೆ ಸ್ವಲ್ಪ ಮಳೆಯಾಗಿದ್ದರಿಂದ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಆದ್ರೆ ಮಧ್ಯಾಹ್ನದ ವೇಳೆಗೆ ಕ್ಷೇತ್ರ ಭಕ್ತರಿಂದಲೂ ತುಂಬಿ ಹೋಗಿತ್ತು. ಬಂದ ಭಕ್ತರೆಲ್ಲರು ಪ್ರಸಾದ ಸ್ವೀಕರಿಸಿ ಮಹಾಗಣಪತಿಯ ಕೃಪೆಗೆ ಪಾತ್ರರಾದ್ರು..
ಒಟ್ನಲ್ಲಿ ವಿಶೇಷವಾದ ಅಂಗಾರಕ ಸಂಕಷ್ಟಿ ನಿಮಿತ್ತ ಇಡಗುಂಜಿ ಮಹಾಗಣಪತಿ ದೇವಸ್ಥಾನದಲ್ಲಿ, ಭಕ್ತರು ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿದ್ರು. ಸದಾ ನಿಂತುಕೊಂಡಿರುವ ಭಂಗಿಯಲ್ಲೇ ತನ್ನ ಸನ್ನಿಧಿಗೆ ಬರುವ ಭಕ್ತರ ದುಗುಡ ದುಮ್ಮಾನಗಳನ್ನು ಬಾಲ ಗಣಪತಿ ಆಲಿಸಿದ…
ದರ್ಶನ ಜೊತೆಗೆ ವಿರೇಶ್.. ನುಡಿಸಿರಿ ನ್ಯೂಸ್ ಡೆಸ್ಕ್, ಹೊನ್ನಾವರ