ಮೆಲ್ಲಿದವನೇ ಬಲ್ಲ ಗೇರು ಮೊಳಕೆಯ ಸ್ವಾದ – ಗ್ರಾಮೀಣ ಪ್ರದೇಶಗಳಲ್ಲಿ ಜೋರು ಗೇರು ಮೊಳಕೆ ಸಂಗ್ರಹ

ಸಂಗ್ರಹ ಚಿತ್ರ

ಹೊನ್ನಾವರ ಜೂನ್‌ 12 : ಈಗ ಮಳೆಗಾಲ ಶುರುವಾಗಿದೆ.. ಮಲೆನಾಡಿನಲ್ಲಿ ಮಳೆಗಾಲ ಚೆಂದವೇ ಬೇರೆ.. ಇಲ್ಲಿ ಧೋ ಎಂದು ಸುರಿಯೋ ಮಳೆ, ಬರೀ ನೀರಾಗಿ ಇಳಿಯೋದಿಲ್ಲ, ಅದೊಂದು ಬದುಕೇ ಆಗಿಬಿಡುತ್ತೆ. ಪ್ರಕೃತಿ ಸೌಂದರ್ಯಗಳ ನಡುವೆ ಇಣುಕುವ ಇಲ್ಲಿನ ಮಳೆ ಹನಿಗಳ ಲೀಲೆಯೇ ಹಾಗೇ. ಅದು ಅಂಥ ವೈಶಿಷ್ಟ್ಯತೆ, ರೋಮಾಂಚನ ಅನುಭವ ನೀಡುತ್ತದೆ… 

ಸಂಗ್ರಹ ಚಿತ್ರ ಟಿ.ಜಿ ಹೆಗಡೆ ಮಾಗೋಡ

ಋತುಮಾನಕ್ಕೆ ತಕ್ಕಂತೆ ಮಲೆನಾಡಿನ ಖಾದ್ಯಗಳು ಬದಲಾಗುತ್ತವೆ. ಇಂಥ ಖಾದ್ಯಗಳ ತಯಾರಿಕೆ ನಮ್ಮ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ತಲೆ ತಲೆಮಾರುಗಳಿಂದ ಒಲಿದು ಬಂದಿದೆ. ಇದು ಮಳೆ ಸೀಸನ್. ಥಂಡಿಯೆದ್ದ ಮೈಗೆ, ರುಚಿ ಬೇಡುವ ನಾಲಗೆಗೆ ಅದೆಂಥದೋ ಒಂದು ಬೆಚ್ಚನೆಯ ಹಿತಾನುಭವ ನೀಡುವ ಖಾದ್ಯ ಅಂದ್ರೆ, ಅದು ಗೇರು ಬೀಜದ ಹಸಿರು ಮೊಳಕೆ…

ಸಂಗ್ರಹ ಚಿತ್ರ ಟಿ.ಜಿ ಹೆಗಡೆ ಮಾಗೋಡ

ಗೇರು ಬೀಜದ ಮೊಳಕೆಯ ಸ್ವಾದ ಅನುಭವಿಸಿದವರಿಗೆ ರುಚಿ ಹೇಗಿರುತ್ತದೆ ಅಂತ ಪ್ರಶ್ನಿಸಿದ್ರೆ, ನಿಜಕ್ಕೂ ಅದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿಬಿಡುತ್ತದೆ. ಯಾಕಂದ್ರೆ ಗೇರು ಮೊಳಕೆಯಲ್ಲಿ ಸಿಹಿಯೋ.. ಖಾರವೋ..? ಅಲ್ಲವೇ ಅಲ್ಲ.. ಹುಳಿ, ಉಪ್ಪು, ಕಹಿ, ಚೊಗರು, ಊಹೂಂ ಅದ್ಯಾವುದೂ ಅಲ್ಲ. ಕರಾರುವಕ್ಕಾಗಿ ಹೇಳಿಕೊಳ್ಳುವಂತ ಪರಿಮಳವನ್ನೂ ಹೊಂದಿಲ್ಲ.. ಆದ್ರೆ ಇದರ ಸ್ವಾದ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆಂಬ ಛಪಲ ಮೂಡಿಸೂವುದರಲ್ಲಿ ಅನುಮಾನವೇ ಇಲ್ಲ…

ನಿಜ.. ಇದೇ ಕಾರಣಕ್ಕೆ ಮಲೆನಾಡಿನಲ್ಲಿ ಒಂದು ಮಾತು ಚಾಲ್ತಿಯಲ್ಲಿದೆ. ಮೆಲ್ಲಿದವನೇ ಬಲ್ಲ ಗೇರು ಬೀಜದ ಹಸಿರು ಮೊಳಕೆಯ ಸ್ವಾದ ಅಂತ. ಈಗಂತೂ ಮಳೆಗಾಲ.. ಗೇರು ಮರದಿಂದ ಬಿದ್ದ ಬೀಜಗಳು ಮೊಳಕೆಯೊಡೆಯುತ್ತವೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ.. ಕಬ್ಬಿಣ, ಕ್ಯಾಲ್ಶಿಯಂ ಹಾಗೂ ನಾರಿನಂಶಗಳ ಆಗರವಾಗಿರುತ್ತದೆ.. ಗೋಡಂಬಿ ಬೀಜಕ್ಕಿಂತ ಮೊಳಕೆಯಲ್ಲಿ ಪೋಷಕಾಂಶಗಳು ಹೆಚ್ಚಿರುತ್ತೆ. ಕೊಬ್ಬಿನ ಅಂಶ ಮೊಳಕೆಯೊಡೆಯುವಾಗ ಅರ್ಧದಷ್ಟು ಕಡಿಮೆಯಾಗಿರುತ್ತೆ. ಹೀಗಾಗಿ ಇದು ಆರೋಗ್ಯಕ್ಕೆ ಅನುಕೂಲಕರವಾಗಿರುತ್ತೆ..

ಈ ಗೇರು ಬೀಜದ ಹಸಿರು ಮೊಳಕೆಯನ್ನು ಬಳಿಸಿಕೊಂಡು ಹೊಸ ರುಚಿಗಳನ್ನು ತಯಾರಿಸಬಹುದು. ಪಲ್ಲೆ, ಕೇಸರಿಬಾತ್‌, ಪಾಯಸಕ್ಕೆ ಈ ಮೊಳಕೆಯನ್ನು ಬಳಸುತ್ತಾರೆ. ಮಕ್ಕಳಂತೂ ಈ ಮೊಳಕೆಯ ಪಾಯಸ, ಕೇಸರಿಬಾತ್‌ ಅನ್ನು ತುಂಬ ಇಷ್ಟಪಡ್ತಾರೆ. ಇನ್ನು ನಗರಗಳಲ್ಲಿ ಈ ಮೊಳಕೆಗಳಿಂದ ಸಲಾಡ್‌, ಗ್ರೇವಿ,  ಪ್ರೈಡ್‌ ರೈಸ್‌ ಮಾಡಿ ಸವಿಯುತ್ತಾರೆ. ಆದ್ರೆ ಹಳ್ಳಿಗರಂತಲ್ಲ.. ದುಡ್ಡು ಕೊಟ್ಟೆ ಇದರ ಸ್ವಾದವನ್ನು ಸವಿಯಬೇಕು..

ಹೆಚ್ಚಾಗಿ ಗ್ರಾಮೀಣ ಭಾಗದ ಮಕ್ಕಳು ಮುಂಗಾರು ಮಳೆ ಆರಂಭವಾಗುತ್ತಲೇ ಗೇರು ಬೇಣಗಳಲ್ಲೆಲ್ಲ ಸುತ್ತಾಡಿ, ಜಾಲಾಡಿ, ಹುಡುಕಾಟ ನಡೆಸಿಗೇರು ಬೀಜದ ಮೊಳಕೆಗಳನ್ನು ಸಂಗ್ರಹಿಸಿ ಮನೆಗೆ ತಂದು ಪಲ್ಲೆಯೋ ಇಲ್ಲ ಪಾಯಸವನ್ನು ಮಾಡಿ ಸವೀತಾರೆ. ಇನ್ನು ಈ ಮೊಳಕೆಯನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ಆರಿಸಿ ತಂದು ಪಟ್ಟಣದಲ್ಲಿ 1 ರೂಪಾಯಿಗೆ ಮಾರಾಟ ಮಾಡಿ ಆದಾಯವನ್ನು ಗಳಿಸ್ತಾರೆ. ಒಟ್ನಲ್ಲಿ ನಾಲಿಗೆಗೆ ಹೊಸ ರುಚಿ ನೀಡುವ ಈ ಗೇರು ಬೀಜದ ಮೊಳಕೆಯನ್ನು ಮಳೆಗಾಲದಲ್ಲಿ ನೀವು ಒಮ್ಮೆಯಾದ್ರೂ ಸವಿಯಲೇಬೇಕು…

ನುಡಿಸಿರಿಗಾಗಿ ಮಾಗೋಡಿನಿಂದ ಟಿ.ಜಿ.ಹೆಗಡೆಯವರಿಂದ ವಿಶೇಷ ವರದಿ