T20 World Cup 2024: ನ್ಯೂಯಾರ್ಕ್ನಲ್ಲಿ ಇಂದು (ಜೂ.12) ನಡೆಯಲಿರುವ ಟಿ20 ವಿಶ್ವಕಪ್‌ನ 25ನೇ ಪಂದ್ಯದಲ್ಲಿ ಭಾರತ ಮತ್ತು ಯುಎಸ್ಎ ತಂಡಗಳು ಮುಖಾಮುಖಿಯಾಗಲಿದೆ. ನಸ್ಸೌ ಕೌಂಟಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ವರದಿ ಪ್ರಕಾರ, ಇಂದಿನ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯಿದೆ.
ಬುಧವಾರ ಬೆಳಿಗ್ಗೆ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನ ತೇವಾಂಶದಿಂದ ಕೂಡಿರುತ್ತದೆ. ಅಲ್ಲದೆ ಇದೇ ವೇಳೆ ಕಾರ್ಮೋಡಗಳು ಇರಲಿದ್ದು, ಶೇ.40 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಹಾಗೆಯೇ ನ್ಯೂಯಾರ್ಕ್ನ ಸುತ್ತ ಮುತ್ತ ಹವಾಮಾನವು ಶೇ. 64 ರಷ್ಟು ಆರ್ದ್ರತೆಯಿಂದ ಕೂಡಿರಲಿದ್ದು, ಹೀಗಾಗಿ ಭಾರತ ಮತ್ತು ಯುಎಸ್ಎ ನಡುವಣ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಿದೆ.
ಪಂದ್ಯ ರದ್ದಾದರೆ ಪಾಕಿಸ್ತಾನ್ ಔಟ್:
ಒಂದು ವೇಳೆ ಭಾರತ ಮತ್ತು ಯುಎಸ್ಎ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾದರೆ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ. ಏಕೆಂದರೆ ಮಳೆಯ ಕಾರಣ ಪಂದ್ಯ ಕ್ಯಾನ್ಸಲ್ ಆದರೆ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ಹಂಚಲಾಗುತ್ತದೆ.
ಇದರಿಂದ ಉಭಯ ತಂಡಗಳು 5 ಅಂಕಗಳೊಂದಿಗೆ ಸೂಪರ್-8 ಹಂತಕ್ಕೇರಲಿದೆ. ಅತ್ತ ಪಾಕಿಸ್ತಾನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಜಯ ಸಾಧಿಸಿದರೂ ಕೇವಲ 4 ಅಂಕಗಳನ್ನು ಮಾತ್ರ ಹೊಂದಿರಲಿದೆ. ಹೀಗಾಗಿ ಇಂದಿನ ಪಂದ್ಯವು ಮಳೆಯಿಂದ ರದ್ದಾದರೆ ಪಾಕಿಸ್ತಾನ್ ತಂಡ ಅಧಿಕೃತವಾಗಿ ಟಿ20 ವಿಶ್ವಕಪ್ನಿಂದ ಹೊರಬೀಳಲಿದೆ.
ಪಾಕ್ಗೆ ಅದೃಷ್ಟ ಕೈ ಹಿಡಿಯುತ್ತಾ?
ಪಾಕಿಸ್ತಾನ್ ತಂಡ ಸೂಪರ್-8 ಹಂತಕ್ಕೆ ಪ್ರವೇಶಿಸಬೇಕಿದ್ದರೆ ಇಂದಿನ ಪಂದ್ಯದಲ್ಲಿ ಭಾರತ ತಂಡ ಜಯಗಳಿಸಲೇಬೇಕು. ಹಾಗೆಯೇ ಯುಎಸ್ಎ ತಂಡ ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೋಲಬೇಕು. ಹೀಗಾದರೆ ಮಾತ್ರ ಪಾಕ್ ತಂಡಕ್ಕೆ ಸೂಪರ್-8 ಹಂತಕ್ಕೇರಲು ಅವಕಾಶ ಇರಲಿದೆ.
ಅಂದರೆ ಇಲ್ಲಿ ಯುಎಸ್ಎ ತಂಡವು ಮುಂದಿನ 2 ಪಂದ್ಯಗಳಲ್ಲೂ ಸೋಲನುಭವಿಸಬೇಕು. ಈ ಎರಡು ಮ್ಯಾಚ್ಗಳಲ್ಲಿ ಸೋತರೆ ಯುಎಸ್ಎ ತಂಡದ ಪಾಯಿಂಟ್ಸ್ 4 ರಲ್ಲೇ ಉಳಿಯಲಿದೆ.
ಇತ್ತ ಪಾಕಿಸ್ತಾನ್ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ನೆಟ್ ರನ್ ರೇಟ್ ಸಹಾಯದಿಂದ ಯುಎಸ್ಎ ತಂಡವನ್ನು ಹಿಂದಿಕ್ಕಿ ಸೂಪರ್-8 ಹಂತಕ್ಕೇರಬಹುದು.
ಹೀಗಾಗಿ ಇಂದಿನ ಪಂದ್ಯವು ಯಾವುದೇ ಕಾರಣಕ್ಕೂ ರದ್ದಾಗಬಾರದೆಂದು, ಈ ಮ್ಯಾಚ್ನಲ್ಲಿ ಟೀಮ್ ಇಂಡಿಯಾದ ಗೆಲುವನ್ನು ಪಾಕಿಸ್ತಾನ್ ಬಯಸುತ್ತಿದೆ. ಈ ಮೂಲಕ ಟಿ20 ವಿಶ್ವಕಪ್ 2024 ರಲ್ಲಿ ಮುಂದಿನ ಹಂತಕ್ಕೇರುವ ಅವಕಾಶವನ್ನು ಪಾಕಿಸ್ತಾನ್ ತಂಡ ಎದುರು ನೋಡುತ್ತಿದೆ.