ಸೂಪರ್‌ ಓವರ್‌ ಥ್ರಿಲ್ಲರ್‌ – ಕ್ರಿಕೆಟ್‌ ಶಿಶು ಅಮೆರಿಕದ ಮುಂದೆ ಸೋತ ಪಾಕ್‌!

ಸೂಪರ್ ಓವರ್‌ನಲ್ಲಿ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸುವ ಮೂಲಕ ಅಮೇರಿಕಾ ತಂಡ ಇತಿಹಾಸ ನಿರ್ಮಿಸಿದೆ. ಈ ಪಂದ್ಯ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ. ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ವಿಶ್ವಕಪ್‌ನ 11ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಭಾರಿ ಹೊಡೆತ ನೀಡಿದೆ. ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡುತ್ತಿರುವ ಪಾಕಿಸ್ತಾನ ತಂಡ ಸೂಪರ್ ಓವರ್‌ನಲ್ಲಿ 5 ರನ್‌ಗಳಿಂದ ಸೋತಿದೆ.

ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ  ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ರಣರೋಚಕ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಸೂಪರ್​ ಓವರ್​ನಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಗೆಲುವಿಗೆ 160 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಅಮೆರಿಕ ಕೂಡ 20 ಓವರ್​​ಗಳಲ್ಲಿ 3 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಸೂಪರ್​ ಓವರ್​ನತ್ತ ಸಾಗಿತು. ಸೂಪರ್ ಓವರ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ 19 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 1 ವಿಕೆಟ್ ಕಳೆದುಕೊಂಡು 13 ರನ್​ಗಳನಷ್ಟೇ ಕಲೆಹಾಕಲು ಶಕ್ತವಾಗಿ 5 ರನ್​​ಗಳಿಂದ ಸೋಲೊಪ್ಪಿಕೊಂಡಿತು.

ಪಾಕ್ ತಂಡಕ್ಕೆ ಕಳಪೆ ಆರಂಭ

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಬಂದ ಪಾಕಿಸ್ತಾನ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 5 ಓವರ್‌ಗಳೊಳಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ತಂಡ 5 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 26 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಮೊದಲ 10 ಓವರ್​ಗಳವರೆಗೂ ಪಂದ್ಯದಲ್ಲಿ ಅಮೆರಿಕ ತಂಡ ಹಿಡಿತ ಸಾಧಿಸಿತ್ತು. ಆದರೆ ಆ ಬಳಿಕ ನಾಯಕ ಬಾಬರ್ ಆಝಂ ಹಾಗೂ ಶಾದಾಬ್ ಖಾನ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಈ ವೇಳೆ ಬಾಬರ್ 43 ರನ್​ಗಳ ಇನ್ನಿಂಗ್ಸ್ ಆಡಿದರೆ, ಶಾದಾಬ್ 40 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಶಾಹೀನ್ ಆಫ್ರಿದಿ 23 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಹೀಗಾಗಿ ಪಾಕ್ ತಂಡ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು.

ನಾಯಕನ ಇನ್ನಿಂಗ್ಸ್ ಆಡಿದ ಮೊನಾಂಕ್

ಇದಾದ ಬಳಿಕ ಗುರಿ ಬೆನ್ನತ್ತಿದ ಅಮೆರಿಕ ತಂಡ ಅಮೋಘ ಆರಂಭ ಪಡೆದುಕೊಂಡಿತು. ತಂಡ 5 ಓವರ್‌ಗಳವರೆಗೆ ಯಾವುದೇ ವಿಕೆಟ್ ಕಳೆದುಕೊಳ್ಳದೆ 36 ರನ್ ಕಲೆಹಾಕಿತು. ಆ ನಂತರ ಆರಂಭಿಕ ಸ್ಟೀವನ್ ಟೇಲರ್ 12 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಒಂದಾದ ನಾಯಕ ಮೊನಾಂಕ್ ಪಟೇಲ್ ಮತ್ತು ಆಂಡ್ರೀಸ್ ಗೂಸ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರು ಒಟ್ಟಾಗಿ 68 ರನ್​ಗಳ ಜೊತೆಯಾಟ ಕಟ್ಟಿದರು. ಈ ಹಂತದಲ್ಲಿ ಆಂಡ್ರೀಸ್ ಗೂಸ್ 35 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಇವರು ಔಟಾದ ಬೆನ್ನಲ್ಲೇ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ನಾಯಕ ಮೊನಾಂಕ್ ಪಟೇಲ್ ಕೂಡ ಔಟಾದರು. ಸುಲಭವಾಗಿ ಗುರಿ ಬೆನ್ನಟ್ಟುವಂತೆ ತೊರುತ್ತಿದ್ದ ಅಮೆರಿಕ ತಂಡ, ಇಲ್ಲಿಂದ ಸೋಲಿನ ಸುಳಿಯತ್ತ ಸಾಗಿತು. ಇದಕ್ಕೆ ಕೊನೆಯಲ್ಲಿ ಪಾಕ್ ವೇಗಿಗಳ ಕರಾರುವಕ್ಕಾದ ದಾಳಿಯೂ ಕಾರಣವಾಗಿತ್ತು.

ಪಾಕ್ ಬೌಲರ್​ಗಳ ಎಡವಟ್ಟೇ ತಂಡದ ಸೋಲಿಗೆ ಕಾರಣ

ಹೀಗಾಗಿ ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಅಮೆರಿಕ ತಂಡಕ್ಕೆ ಗೆಲ್ಲಲು 5 ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ನಿತಿಶ್ ಕುಮಾರ್ ಬೌಂಡರಿ ಬಾರಿಸಿ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಾಗಿ ಪಂದ್ಯ ಸೂಪರ್​ ಓವರ್​ನತ್ತ ಸಾಗಿತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ 19 ರನ್ ಕಲೆಹಾಕಿತು. ಪಾಕ್ ಪರ ಬೌಲಿಂಗ್ ಮಾಡಿದ ಮೊಹಮ್ಮದ್ ಅಮಿರ್ ಕೇವಲ 1 ಬೌಂಡರಿ ನೀಡಿದರಾದರೂ, ವೈಡ್ ಮೂಲಕವೇ 7 ರನ್ ಬಿಟ್ಟುಕೊಟ್ಟರು. ಇದು ತಂಡದ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಬಹುದು. ನಂತರ ಈ ಗುರಿ ಬೆನ್ನಟ್ಟಿದ ಪಾಕ್ ತಂಡಕ್ಕೆ ಇಫ್ತಿಕರ್ ಅಹಮದ್ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಗೆಲುವಿನ ಆಸೆ ಮೂಡಿಸಿದರು. ಆದರೆ ಸೂಪರ್​ ಓವರ್​ನ ಮೂರನೇ ಎಸೆತದಲ್ಲಿ ಅವರ ವಿಕೆಟ್ ಪತನವಾಯಿತು. ಎರಡನೇ ಬ್ಯಾಟರ್ ಆಗಿ ಕಣಕ್ಕಿಳಿದ ಶಾದಾಬ್ ಖಾನ್​ಗೆ ಬಿಗ್ ಶಾಟ್​​ಗಳನ್ನು ಹೊಡೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಾಕಿಸ್ತಾನ ತಂಡ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾಯಿತು.