ವಾಲ್ಮೀಕಿ ನಿಗಮದ ಅವ್ಯವಹಾರ, ತಪ್ಪಿತಸ್ಥರ ಮೇಲೆ ಕ್ರಮವಾಗಲಿ- ರೂಪಾಲಿ ಎಸ್.ನಾಯ್ಕ


ಕಾರವಾರ ಜೂನ್‌ 06 :
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಕೆಲವರ ಬಂಧನವಾಗಿದೆ. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಸಚಿವ ಬಿ.ನಾಗೇಂದ್ರ ರಾಜೀನಾಮೆ ಘೋಷಿಸಿದ್ದಾರೆ. ಆದರೆ ಕೇವಲ ರಾಜೀನಾಮೆ ನೀಡಿದರೆ ಸಾಲದು. ಅವರನ್ನೂ ತನಿಖೆಗೊಳಪಡಿಸಬೇಕು. ಹಗರಣದ ಸಮಗ್ರ ತನಿಖೆ ನಡೆದು ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ ಅವರನ್ನೆಲ್ಲ ತನಿಖೆಗೊಳಪಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.
ಇದೊಂದು ಗಂಭೀರ ಪ್ರಕರಣವಾಗಿದೆ. ಹಣ ವರ್ಗಾವಣೆಯ ಹಿಂದೆ ಯಾರೆಲ್ಲ ಇದ್ದಾರೆ. ಹಣವನ್ನು ಯಾರು ಬಳಸಿದ್ದಾರೆ. ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಸತ್ಯಾಸತ್ಯತೆ ಹೊರಬರಬೇಕು.

ಈಗಾಗಲೆ ಬಿಜೆಪಿ ರಾಜ್ಯಪಾಲರ ಮೊರೆಯನ್ನೂ ಹೋಗಿದೆ. ರಾಜ್ಯಪಾಲರ ಬಳಿ ಪಾದಯಾತ್ರೆಯಲ್ಲಿ ತೆರಳಿದ ಬಿಜೆಪಿ ನಾಯಕರು, ಪದಾಧಿಕಾರಿಗಳ ಜೊತೆ ನಾನೂ ಭಾಗಿಯಾಗಿದ್ದೆ. ಕೇವಲ ಸಚಿವ ನಾಗೇಂದ್ರ ಅಷ್ಟೇ ಅಲ್ಲ, ಇನ್ನೂ ಉನ್ನತ ವ್ಯಕ್ತಿಗಳೂ ಈ ಅವ್ಯವಹಾರದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಪಕ್ಷದ ಮುಖವಾಡ ಕಳಚಿಬೀಳಬೇಕಾಗಿದೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಮೇಲೆ ಯಾವುದೇ ದಾಖಲೆ ಇಲ್ಲದೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಈಗ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿರುವುದು ವಿಪರ್ಯಾಸವಾಗಿದ್ದು, ಕಾಂಗ್ರೆಸ್ಸಿಗರಿಗೆ ಇದು ತಿರುಗುಬಾಣವಾಗಿದೆ ಎಂದು ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.