ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೇ ತೊಂದರೆ: ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

ದಾವಣಗೆರೆ : ನಮ್ಮ ದೇಶ ಹಿಂದೂ ರಾಷ್ಟ್ರ ಆಗಬಾರದು. ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿಲ್ಲ. ಇದನ್ನು ಅಂಬೇಡ್ಕರ್ ಅವರೇ ಹೇಳಿದ್ದಾರೆ. ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ದೇಶಕ್ಕೇ ತೊಂದರೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ದಾವಣಗೆರೆಯ ರುದ್ರನಕಟ್ಟೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ  ಯತೀಂದ್ರ ಸಿದ್ದರಾಮಯ್ಯ, ನಮ್ಮ ದೇಶ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನ, ಅಫ್ಘಾನಿಸ್ತಾನ ಥರಾನೇ ಆಗುತ್ತದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಧರ್ಮದ ಹೆಸರಲ್ಲಿ ಸರ್ವಾಧಿಕಾರ ಮಾಡಿ ದಿವಾಳಿಯಾಗಿವೆ. ದೇಶ ಜಾತ್ಯಾತೀತ ತತ್ವ ಬಿಟ್ಟು ಧರ್ಮದ ಹಿಂದೆ ಹೋದರೆ ಅಭಿವೃದ್ಧಿ ಕಾಣಲ್ಲ ಎಂದರು.

ಇವತ್ತು ಜಾತ್ಯಾತೀತ ತತ್ವಕ್ಕೆ ಅಪಾಯ ಬಂದಿದೆ. ಬಿಜೆಪಿ ಹಾಗೂ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನಿಂದ ಅಪಾಯ ಶುರುವಾಗಿದೆ. ಬಿಜೆಪಿಯ ಅಂಗ ಸಂಘಟನೆಗಳು ಹಿಂದೂ ದೇಶ ಮಾಡೋಕೆ ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ದೇಶ ಕೂಡ ಪಾಕಿಸ್ತಾನ ಅಪ್ಘಾನಿಸ್ತಾನ ಆಗುತ್ತದೆ. ಧರ್ಮದ ಮೇಲೆ ರಾಜಕೀಯ ಮಾಡುವ ಪಕ್ಷಗಳ ಬಗ್ಗೆ ನಾವು ಹುಷಾರಾಗಿರಬೇಕು. ಧರ್ಮದಿಂದ ಹಿಂದುಳಿದವರು ಮೇಲೇಳೋಕೆ ಸಾಧ್ಯವಾಗುತ್ತಿಲ್ಲ. ಇತಿಹಾಸವನ್ನು ನೋಡಿ ನಾವು ಪಾಠ ಕಲಿಯಬೇಕು. ಇತಿಹಾಸ ನೋಡಿ ನಾವು ದೇಶವನ್ನು ಕಟ್ಟಬೇಕು. ದೇಶಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.

ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಹಿಂದುಳಿದವರು, ಅಲ್ಪ ಸಂಖ್ಯಾತ ಜಡ್ಜ್‌ಗಳು ಎಷ್ಟು ಜನರಿದ್ದಾರೆ. ಮೇಲ್ವರ್ಗದವರೇ ಸಮಾಜವನ್ನು ನಿಯಂತ್ರಣ ಮಾಡುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ನಮಗೂ ಕೂಡ ಸಮಾಜದಲ್ಲಿ ಉನ್ನತ ಸ್ಥಾನಗಳು ಸಿಗಬೇಕು. ಧರ್ಮಕ್ಕಾಗಿ ಇನ್ನೊಬ್ಬರ ಜೊತೆ ಹೋರಾಟ ಮಾಡಲು ಹೋದರೆ ನಮ್ಮ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ. ಇದಕ್ಕಾಗಿ ನಾವು ಬದಲಾಗಬೇಕು ಎಂದು ನುಡಿದರು. ಇಡೀ ದೇಶವೇ ಕಾತರದಿಂದ ಎದುರು ನೋಡುತ್ತಿರುವ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿರುವಾಗಲೇ ಯತೀಂದ್ರ ಸಿದ್ದರಾಮಯ್ಯ ನೀಡಿದ ಈ ಹೇಳಿಕೆ ವಿವಾದದ ಕಿಡಿಯನ್ನ ಹೊತ್ತಿಸಿದೆ…