ಜ.6 ಹಾಗೂ 7 ರಂದು ‘ನಾದೋಪಾಸನ’

ಶ್ರೀಧಾಮ ಕಾನ್ಫರೆನ್ಸ್ ಹಾಲ್ ನಲ್ಲಿ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ, ಸಂಗೀತ ರಸದೌತಣ.

ಕುಮಟಾ : ತಾಲೂಕಿನ ಬಗ್ಗೋಣದ ಸಾಧನಾ ಸಂಗೀತ ವಿದ್ಯಾಲಯ ಹಾಗೂ ಕಲ್ಕತ್ತಾದ ಸುರ್ ಸಂಗಮ ಇವರ ಸಂಯುಕ್ತ ಆಶ್ರಯದಲ್ಲಿ ‘ನಾದೋಪಾಸನಾ’ ಕಾರ್ಯಕ್ರಮವು ಜ. ೬ ಶನಿವಾರ ಹಾಗೂ ಜ.೭ ರವಿವಾರ ಮಧ್ಯಾಹ್ನ ೨.೩೦ ಗಂಟೆಯಿಂದ ಮಹಾಲಕ್ಷ್ಮೀ ಕಂಫರ್ಟ (ದಾಸ ಕಾಂಪ್ಲೆಕ್ಸ್) ನಲ್ಲಿರುವ ಶ್ರೀಧಾಮ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಲಿದೆ ಎಂದು ಸಾಧನಾ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ಲಕ್ಷ್ಮೀ ಬಾಲಚಂದ್ರ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಿ. ಪಂ. ಜಿ.ಆರ್ ಭಟ್ಟ ಬಾಳೆಗದ್ದೆ ಹಾಗೂ ದಿ. ಪಂ.ಎನ್.ಎಸ್. ಹೆಗಡೆ ಹಿರೇಮಕ್ಕಿ ಇವರುಗಳ ಸಂಸ್ಮರಣೆಯೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸನ್ಮಾನ, ಸಂಗೀತ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಜ.೬ ಶನಿವಾರ ಅಪರಾಹ್ನ ೩ ಗಂಟೆಯಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಎಲುಬು ಮತ್ತು ಕೀಲು ತಜ್ಞ ಡಾ. ಶಶಾಂಕ ಮಣಕೀಕರ್ ಕಾರ್ಯಕ್ರಮ ಉದ್ಘಾಟಿಸುವರು. ಅಂತರರಾಷ್ಟ್ರೀಯ ಖ್ಯಾತಿಯ ತಬಲವಾದಕ ಪಂ. ಶಶಿಕಾಂತ (ನಾನಾ)ಮುಳೆ, ಮುಂಬೈ ಇವರಿಂದ ತಬಲಾ ಪ್ರಾತ್ಯಕ್ಷಿಕೆ ನಡೆಯಲಿದೆ.

ತಬಲಾ ಸೋಲೋ ಕಾರ್ಯಕ್ರಮವನ್ನು ಡಾ. ಸಂತೋಷ ಚಂದಾವರಕರ್, ನಗ್ಮಾ – ಸತೀಶ್ ಭಟ್ಟ ಹೆಗ್ಗಾರ ನಡೆಸಿಕೊಡಲಿದ್ದಾರೆ. ವಿ. ಶ್ರೀಧರ ಹೆಗಡೆ ಕಲಭಾಗ ‘ಸಂಧ್ಯಾಗಾನ’ ಕಾರ್ಯಕ್ರಮ ನಡೆಸಿಕೊಡುವರು. ತಬಲಾದಲ್ಲಿ ವಿ.ಎನ್.ಜಿ ಹೆಗಡೆ ಕಪ್ಪೆಕೆರೆ, ಸಂವಾದಿನಿಯಲ್ಲಿ ಸತೀಶ ಭಟ್ಟ ಹೆಗ್ಗಾರ ಸಾತ್ ನೀಡಲಿದ್ದಾರೆ.

ಜ.೭ ರವಿವಾರ ಅಪರಾಹ್ನ ೩ ಗಂಟೆಯಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸ್ವರ ಸಾಧನಾ ಸಂಗೀತ ವಿದ್ಯಾಲಯದ ಹಿರಿಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಸಿಂಚನ ಕಾರ್ಯಕ್ರಮ ನಡೆಯಲಿದೆ. ತಬಲಾದಲ್ಲಿ ಯೋಗಾನಂದ ಭಟ್ಟ, ಸಮರ್ಥ ಎನ್ ಹೆಗಡೆ, ಶ್ರೀಧರ ಹೆಗಡೆ ಹಾಗೂ ಸಂವಾದಿನಿಯಲ್ಲಿ ಮನೋಜ ಭಟ್ಟ ಸಹಕರಿಸಲಿದ್ದಾರೆ.

ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಭಾಗವತ ಸುಬ್ರಾಯ ಭಾಗ್ವತ್ ಕಪ್ಪೆಕೆರೆ ಉದ್ಘಾಟಿಸುವರು. ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ, ವಿಶ್ರಾಂತ ಪ್ರಾಚಾರ್ಯ ಪ್ರೋ.ಎಸ್. ಶಂಭು ಭಟ್ಟ ಅಧ್ಯಕ್ಷತೆ ವಹಿಸುವರು. ಮಹಾತ್ಮಾ ಗಾಂಧಿ ಪ್ರೌಢಶಾಲೆ ಚಿತ್ರಗಿಯ ಮುಖ್ಯ ಅಧ್ಯಾಪಕ ಪಾಂಡುರಂಗ ವಾಗ್ರೇಕರ್, ಜನತಾ ವಿದ್ಯಾಲಯ ಮುರಡೇಶ್ವರದ ಮುಖ್ಯ ಅಧ್ಯಾಪಕಿ ಉಷಾ ಭಟ್ಟ ಅತಿಥಿಗಳಾಗಿ ಹಾಜರಿರುವರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಪಂ. ಶಶಿಕಾಂತ (ನಾನಾ) ಮುಳೆ, ಮುಂಬೈ ಅವರನ್ನು ಸನ್ಮಾನಿಸಲಾಗುವುದು.

ಸ್ವರ ಸಾಧನಾ ಸಂಗೀತ ವಿದ್ಯಾಲಯದ ಸಂಸ್ಥಾಪಕರಾದ ಲಕ್ಷ್ಮೀ ಹೆಗಡೆ ಸಂಗೀತ ಸುಧೆ ಕಾರ್ಯಕ್ರಮ ನಡೆಸಿಕೊಡುವರು. ಇವರಿಗೆ ತಬಲಾದಲ್ಲಿ ವಿ. ಎನ್.ಜಿ‌ ಹೆಗಡೆ ಕಪ್ಪೆಕೆರೆ, ಸಂವಾದಿನಿಯಲ್ಲಿ ವಿಘ್ನೇಶ ಭಾಗ್ವತ್ ಯಲ್ಲಾಪುರ ಸಹಕರಿಸಲಿದ್ದಾರೆ. ನಂತರ ನಡೆಯುವ ಸಂಗೀತ ಸುರುಭಿ ಕಾರ್ಯಕ್ರಮದಲ್ಲಿ ವಿ. ತಿಮ್ಮಣ್ಣ ಹೆಗಡೆ ಗುಡ್ಡೇಬಾಳ ಗಾಯನ ಪ್ರಸ್ತುತಪಡಿಸುವರು. ತಬಲಾದಲ್ಲಿ ಆದಿತ್ಯ ಪನವಲಕರ್, ಸಂವಾದಿನಿಯಲ್ಲಿ ವಿಘ್ನೇಶ ಭಾಗ್ವತ ಯಲ್ಲಾಪುರ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು, ಕಾರ್ಯಕ್ರಮ ಚಂದಗಾಣಿಸುವಂತೆ ಸಂಘಟಕರು ವಿನಂತಿಸಿಕೊಂಡಿದ್ದಾರೆ.