ಕುಮಟಾದ ಕೊಂಕಣ ಎಜ್ಯುಕೇಶನ್ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು, ಅಂಚೆ ಇಲಾಖೆ ಹಾಗೂ ಪೋಲೀಸ್ ಇಲಾಖೆಯ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ಅಲ್ಲಿಗೆ ಭೇಟಿ ನೀಡಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಜೊತೆ ಸಂವಾದ ನಡೆಸಿದ್ರು..
ಐದನೇ ವರ್ಗದ ವಿದ್ಯಾರ್ಥಿಗಳು ಅಂಚೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಯ ಪೋಸ್ಟ್ ಮಾಸ್ಟರ್ ಎಂ.ಎಸ್ ಗೊಂಡ ಹಾಗೂ ಸಿಬ್ಬಂದಿ ಕಿರಣ ಪೈ ವಿದ್ಯಾರ್ಥಿಗಳಿಗೆ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ಮಾಹಿತಿ ನೀಡಿದ್ರು. ಭಾರತೀಯ ಅಂಚೆ ಇಲಾಖೆ, ವಿವಿಧ ಸೇವೆಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದ್ದು ಅದರಲ್ಲಿ ಪತ್ರ ವ್ಯವಹಾರ, ನೊಂದಾಯಿತ ಪತ್ರವ್ಯವಹಾರ, ಶೀಘ್ರ ಅಂಚೆ, ಪಾರ್ಸೆಲ್ ಸೇವೆ, ಇ-ಅಂಚೆ, ವಿಶೇಷ ಕೊರಿಯರ್ ಸೇವೆ ಇನ್ನಿತರ ಸೇವೆಗಳು ಸೇರಿವೆ ಎಂದು ತಿಳಿಸಿದ್ರು..
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅಂಚೆ ಸ್ಟಾಂಪ್ ಕುರಿತಾಗಿ ಮಾಹಿತಿ ನೀಡಿದ ಇಲಾಖಾ ಸಿಬ್ಬಂದಿ ಕಿರಣ ಪೈ, ಯಾವ ಯಾವ ಸ್ಟಾಂಪ್ ಗಳು ಇವೆ ಮತ್ತು ಅದರ ಮಾದರಿ, ದರಗಳು ಏನೇನು ಹಾಗೂ ಅವುಗಳನ್ನು ಪತ್ರಕ್ಕೆ ಅಂಟಿಸುವುದು ಹೇಗೆ ಮತ್ತು ಅದು ಯಾವ ರೀತಿಯಲ್ಲಿ ಉಪಯೋಗವಾಗುತ್ತದೆ ಎಂದು ವಿವರಿಸಿದ್ರು.
ಇನ್ನು ಆರನೇ ವರ್ಗದ ವಿದ್ಯಾರ್ಥಿಗಳು ಕುಮಟಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆ ಬಗೆಗೆ ಪೊಲೀಸ್ ನಿರೀಕ್ಷಕರು, ಠಾಣಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ಕುಮಟಾ ಠಾಣಾ ನಿರೀಕ್ಷಕ ತಿಮ್ಮಪ್ಪ ನಾಯ್ಕ ಸ್ವತಃ ತಾವೇ ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಅವರಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಿದ್ರು..
ಠಾಣೆಗೆ ಪ್ರವೇಶಿಸುವ ಪ್ರತಿಯೊಬ್ಬರೂ ನೋಂದಾವಣೆ ಮಾಡಿಕೊಳ್ಳುವ ಕೌಂಟರ್ ನಿಂದ ಪ್ರಾರಂಭಿಸಿ ಮುಂದೆ ಹವಾಲ್ದಾರರು ನಿರ್ವಹಿಸುವ ಜವಾಬ್ದಾರಿಗಳು, ಪೊಲೀಸ್ ಸಂಪರ್ಕ ವ್ಯವಸ್ಥೆ, ಶಸ್ತ್ರಾಸ್ತ್ರಗಳ ಬಳಕೆ, ಹಾಗೂ ಶಸ್ತ್ರಾಸ್ತ್ರಗಳ ಕುರಿತಾಗಿ ಸಿಬ್ಬಂದಿಗಳು ಕಾರ್ಯನಿರ್ವಹಿಸುವ ವೈಖರಿ, ಗಣಕಯಂತ್ರದಲ್ಲಿ ಎಲ್ಲ ಮಾಹಿತಿಗಳನ್ನು ದಾಖಲಿಸುವ ವಿವರಗಳು ಹಾಗೂ ಪಾತಕ ಕೃತ್ಯ ಎಸಗುವವರಿಗೆ ಶಿಕ್ಷೆ ವಿಧಿಸುವುದರ ಬಗೆಗೆ ಸಂಪೂರ್ಣ ವಿವರಣೆಯನ್ನು ಈ ಸಂದರ್ಭದಲ್ಲಿ ಅವರು ನೀಡಿದ್ರು..
ಪೊಲೀಸ್ ಸಿಬ್ಬಂದಿ ಗುರು ನಾಯಕ ವಿದ್ಯಾರ್ಥಿಗಳಿಗೆ ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಹಾಗೂ ಕುಮಟಾ ಠಾಣೆಯಲ್ಲಿ ಇರುವ ವ್ಯವಸ್ಥೆಗಳು, ಬಂಧೀಖಾನೆ ವ್ಯವಸ್ಥೆ, ಆರೋಪಿತರು ಹಾಗೂ ಅಪರಾಧಿಗಳ ನಡುವಿನ ವ್ಯತ್ಯಾಸ ಹಾಗೂ ಇತರ ವಿಷಯಗಳ ವಿವರಣೆ ನೀಡಿದ್ರು. ಪಿಎಸ್ಐ ಗಳಾದ ನವೀನ ನಾಯ್ಕ, ಇ.ಸಿ ಸಂಪತ್ , ಸುನೀಲ್ ಬಂಡಿವಡ್ಡರ್ ಇತರರು ಸಹಕರಿಸಿದ್ರು.
ಬಳಿಕ ವಿದ್ಯಾರ್ಥಿಗಳಿಗೆ ಅತ್ಯುತ್ತಮ ರೀತಿಯಲ್ಲಿ ವಿವರಣೆ ನೀಡಿದ ಎಲ್ಲಾ ಸಿಬ್ಬಂದಿಗಳನ್ನು ಶಿಕ್ಷಕ ಗಣೇಶ ಜೋಶಿ ವಂದಿಸಿದ್ರು. ಈ ವೇಳೆ ಇತರ ಶಿಕ್ಷಕರು ಸಹಕರಿಸಿದ್ರು..