2011ರ ವಿಶ್ವಕಪ್ನಲ್ಲಿ ಭಾರತ ತಂಡದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡ ನಂತರ ರೋಹಿತ್ ಶರ್ಮಾ ಅವರು ಇದೀಗ ಅದೇ ಭಾರತ ತಂಡದ ನಾಯಕರಾಗಿ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದು ಇದು ಭಾವನಾತ್ಮಕ ಕ್ಷಣವಾಗಿದೆ. ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಟಾಸ್ ಸಮಯದಲ್ಲಿ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಅವರೊಂದಿಗೆ ಮಾತನಾಡಿದ ನಾಯಕ ರೋಹಿತ್ ಶರ್ಮಾ, ನನ್ನ ಕನಸು ನನಸಾಗುವ ಕ್ಷಣ ಎಂದು ಹೇಳಿದ್ದಾರೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಒಂದು ವೇಳೆ ಭಾರತ ಟಾಸ್ ಗೆದಿದ್ದರೆ ಏನು ಮಾಡುತ್ತಿದ್ದಿರಿ ಎಂಬ ಪ್ರಶ್ನೆಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದಾಗಿ ರೋಹಿತ್ ಹೇಳಿದ್ದಾರೆ.
‘ನಾನು ಮೊದಲು ಬ್ಯಾಟಿಂಗ್ ಮಾಡುತ್ತಿದ್ದೆ. ಉತ್ತಮ ಪಿಚ್, ದೊಡ್ಡ ಪಂದ್ಯ ಇದು ಅದ್ಭುತವಾಗಿರುತ್ತದೆ. ಪ್ರತಿ ಬಾರಿ ನಾವು ಇಲ್ಲಿ ಆಡಿದಾಗ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಕ್ರಿಕೆಟ್ ಒಂದು ಅತಿದೊಡ್ಡ ಸಂದರ್ಭ. ನಾವು ಚೆನ್ನಾಗಿ ಮತ್ತು ಶಾಂತವಾಗಿ ಇರಬೇಕು’ ಎಂದು ರೋಹಿತ್ ಹೇಳಿದ್ದಾರೆ.
2011 ರಿಂದ 2023 ರವರೆಗೆ ಅವರ ಕ್ರಿಡಾ ಪ್ರಯಾಣದ ಬಗ್ಗೆ ಶಾಸ್ತ್ರಿ ಕೇಳಿದಾಗ ರೋಹಿತ್, ‘ತಮ್ಮ ಕನಸು ನನಸಾಗಿದೆ. ಫೈನಲ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಬೇಕೆಂಬ ನನ್ನ ಕನಸು ನನಸಾಗಿದೆ. ನಮ್ಮ ಮುಂದೆ ಏನಿದೆ ಎಂದು ನನಗೆ ಗೊತ್ತು. ನಾವು ಉತ್ತಮವಾಗಿ ಆಡಬೇಕು ಮತ್ತು ಫಲಿತಾಂಶವನ್ನು ಪಡೆಯಬೇಕು. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕಳೆದ 10 ಪಂದ್ಯಗಳಲ್ಲಿ ನಾವು ಸ್ಥಿರವಾಗಿ ಆಡಿದ್ದೇವೆ. ಅದೇ ತಂಡ ಇಂದಿನ ಪಂದ್ಯವನ್ನು ಆಡುತ್ತಿದೆ’ ಎಂದಿದ್ದಾರೆ.
2003ರ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ತವಕದಲ್ಲಿದೆ. ಟೀಂ ಇಂಡಿಯಾ ಗೆಲ್ಲಲಿ ಎಂದು ದೇಶಾದ್ಯಂತ ಶುಭಾಷಯಗಳ ಸುರಿಮಳೆಯ ಹರಿದು ಬರುತ್ತಿದೆ. ಆಸ್ಟ್ರೇಲಿಯಾ ಕೂಡ 6ನೇ ಬಾರಿ ಟ್ರೋಫಿ ಗೆಲ್ಲುವ ವಿಶ್ವಾಸ ಹೊಂದಿದೆ.