ಡಾ.ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ.

ಅಂಕೋಲಾ: ತಾಲೂಕಿನ ಡಾ.ದಿನಕರ ದೇಸಾಯಿ ಸ್ಮಾರಕ ಕನ್ನಡ ಮತ್ತು ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆ ಹಾಗೂ ಥಕ್ಕರಬಾಪಾ ಪೂರ್ವ ಪ್ರಾಥಮಿಕ ಶಾಲೆ ಇವರ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಲಾವಿದ ಹಾಗೂ ಪತ್ರಕರ್ತ ನಾಗರಾಜ ಜಾಂಬಳೇಕರ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸ್ಪರ್ಧಾ ಮನೋಭಾವ ಬೆಳೆಸುವುದು ಅಗತ್ಯವಾಗಿದ್ದು ಛದ್ಮವೇಷ ಸ್ಪರ್ಧೆಯಂತಹ ಕಾರ್ಯಕ್ರಮಗಳು ಈ ದಿಶೆಯಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ.
ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಶಾಲಾ ಹಂತದಲ್ಲಿ ಗುರುತಿಸಲು ಹಲವಾರು ಸ್ಪರ್ಧೆಗಳನ್ನು ನಡೆಸಿ ಅದರಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಿದೆ ಎಂದರು.
ಪಿ.ಎಂ.ಹೈಸ್ಕೂಲಿನ ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನಿ ಮಾತನಾಡಿ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ ನಡೆಸುತ್ತಿರುವುದು ಉತ್ತಮ ಕಾರ್ಯ ಎಂದರು. ವೇದಿಕೆಯಲ್ಲಿ ಹಿರಿಯ
ಸಾಹಿತಿ ನಾಗೇಂದ್ರ ನಾಯಕ ತೊರ್ಕೆ, ಪಿ ಎಂ ಪ್ರೌಢಶಾಲೆಯ ಶಿಕ್ಷಕ ಗಿರೀಶ ಶೆಟ್ಟಿ, ಥಕ್ಕರಬಾಪಾ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಸುನೀತಾ ಅರ್ಗೇಕರ ಉಪಸ್ಥಿತರಿದ್ದರು.
ದಿನಕರ ದೇಸಾಯಿ ಸ್ಮಾರಕ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಸುಭಾಷ ನಾಯ್ಕ ಸ್ವಾಗತಿಸಿದರು, ಶಿಕ್ಷಕಿ ಸಂಗೀತಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು, ಶಿಕ್ಷಕಿ ಮಯೂರಿ ಕೆ ನಾಯ್ಕ ವಂದಿಸಿದರು. ದೈಹಿಕ ಶಿಕ್ಷಕ ಸುಧಾಕರ ಲಕ್ಷ್ಮೇಶ್ವರ ಸಹಕರಿಸಿದರು. ಉದ್ಯಮಿ ಮಂಜುನಾಥ ಎಲ್ ನಾಯ್ಕ ಸ್ಪರ್ಧೆಯಲ್ಲಿ ಭಾಗವಹಿಸಿದ ಮೆಲ್ಲ ಮಕ್ಕಳಿಗೆ ಪ್ರೋತ್ಸಾಹಕವಾಗಿ ಬಹುಮಾನ ಪ್ರಾಯೋಜಿಸಿದ್ದರು. ಅಚ್ಚುಕಟ್ಟಾಗಿ ನಡೆದ ಛದ್ಮವೇಷ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ರಂಜಿಸಿದರು. ಈ ಸಂದರ್ಭದಲ್ಲಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.