ಅಂಕೋಲಾ: ಅಂಕೋಲಾದ ವಂದಿಗೆಯ ಮಹಾಮಾಯ ದೇಗುಲದ ಎದುರಿಗಿನ ರಾಷ್ಟ್ರೀಯ ಹೆದ್ದಾರಿಯ ಅಂಚಿನಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಸುಸಜ್ಜಿತ ವಾಸುದೇವ ವಸತಿ ಸಮುಚ್ಚಯ ರವಿವಾರ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು.
ವಾಸುದೇವ ವಸತಿ ಸಮುಚ್ಚಯಯನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರ್ಕಾರದ ನಿಕಟಪೂರ್ವ ಅಡ್ವೊಕೇಟ್ ಜನರಲ್ ಮಧುಸೂದನ ಆರ್ ನಾಯಕ, ಎಲ್ಲರನ್ನು ಜೊತೆಯಾಗಿಸಿ, ಒಂದೇ ಸೂರಿನಡಿ ತರುವ ಪ್ರಯತ್ನವೇ ಈ ಸುಸಜ್ಜಿತ ವಾಸುದೇವ ವಸತಿ ಸಮುಚ್ಚಯ. ಪ್ರೊ. ಕೆ.ವಿ.ನಾಯಕರ ಚಿಂತನೆಗಳು ಯಾವಾಗಲೂ ವಿಭಿನ್ನವಾಗಿಯೇ ಇರುತ್ತವೆ. ತಾಲ್ಲೂಕಿಗೆ ಗುಣಮಟ್ಟದ ವಸತಿ ಸಮುಚ್ಚಯವೊಂದು ದೊರೆತಂತಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿಯ ಕೆ.ಡಿ.ಸಿ.ಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎನ್.ಪಿ ಗಾಂವಕರ ಮಾತನಾಡಿ, ಈ ಜಿಲ್ಲೆ ಅಭಿವೃದ್ಧಿ ಕಾಣಬೇಕು. ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಭೇಧ ಮರೆತು ಜೊತೆಯಾಗಬೇಕು.ಕೆ.ವಿ ನಾಯಕ ನನ್ನ ಆಪ್ತರಿದ್ದು ಈ ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದೇನೆ. ವಾಸುದೇವ ಅಪಾರ್ಟಮೆಂಟ್ ಮುಂದೆಯೂ ಯಶಸ್ಸಿನತ್ತ ಸಾಗಿ ಇಲ್ಲಿ ವಾಸಿಸುವ ಸರ್ವರಿಗೂ ಒಳಿತಾಗಲಿ ಎಂದರು.
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮಾತನಾಡಿ, ಆಧುನಿಕ ಶೈಲ್ಯ ವಾಸುದೇವ ಅಪಾರ್ಟ್ಮೆಂಟ್ ನನ್ನ ಕ್ಷೇತ್ರದಲ್ಲಿ ಆಗಿರುವುದು ಹೆಮ್ಮೆ. ಇದರ ರೂವಾರಿಗಳಾದ ಕೆ.ವಿ.ನಾಯಕರು ಬಹಳ ಬುದ್ಧಿವಂತರು. ಅವರು ಯಾವುದೇ ರಾಜಕೀಯ ಪಕ್ಷದಲ್ಲಿ ಇಲ್ಲದೆ ಇದ್ದರೂ ಓರ್ವ ಜನಪ್ರತಿನಿಧಿಗಳನ್ನು ಗೆಲ್ಲಿಸುವ ಮತ್ತು ಬೀಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವ ತಾಕತ್ತು ಅವರಲ್ಲಿದೆ. ಶಿಸ್ತು ಸಮಯ ಪ್ರಜ್ಞೆಗೆ ಇನ್ನೊಂದು ಹೆಸರೇ ಪ್ರೊ. ಕೆ.ವಿ ನಾಯಕ. ಇವರ ಕಲ್ಪನೆಯ ಈ ವಾಸುದೇವ ವಸತಿ ಸಮುಚ್ಚಯ ಅತ್ಯಂತ ಸುಂದರ ಸೌದವಾಗಿ ಎದ್ದು ನಿಂತಿದೆ ಎಂದರು.
ಕುಮಟಾ – ಹೊನ್ನಾವರ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆ ಮೂಲಭೂತ ಸೌಕರ್ಯಗಳಿಂದ ಹಿಂದಿದೆ.ಇಲ್ಲಿ ಕರಾವಳಿ ತೀರ ಇದ್ದರೂ ಮೀನುಗಾರಿಕಾ ವಿಶ್ವವಿದ್ಯಾಲಯ ಬೀದರನಲ್ಲಿದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಈ ಜಿಲ್ಲೆಗೆ ಮೀನುಗಾರಿಕಾ ವಿಶ್ವವಿದ್ಯಾಲಯ ನೀಡಲು ವಿನಂತಿಸಿದ್ದೆ. ನಮ್ಮ ಜಿಲ್ಲೆ ಅಭಿವೃದ್ಧಿಗೆ ಎಲ್ಲರೂ ಜೊತೆಯಾಗಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಈ ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಾರೆ. ನಾನು ಈ ಜಿಲ್ಲೆಯ ಅಭಿವೃದ್ಧಿಗೆ ಜೊತೆಯಾಗುತ್ತೇನೆ. ಇಲ್ಲಿ ನಿರ್ಮಾಣಗೊಂಡ ವಸತಿ ಸಮುಚ್ಚಯ ಮಾದರಿಯಾಗಿದೆ. ಪ್ರೊ ಕೆ ವಿ ನಾಯಕ ಆಯ್ಕೆಯಲ್ಲಿ ಹೊಸತನವಿದೆ. ಅವರು ಮೊದಲಿನಿಂದಲೂ ಪ್ರಾಜ್ಞರು ಎಂದರು.
ಪ್ರೊ. ಕೆ.ವಿ. ನಾಯಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ,ಅಂಕೋಲಾದಲ್ಲಿ ಹಲವು ಜನರನ್ನು ಒಂದೇ ಸೂರಿನಡಿ ತಂದು ಇಲ್ಲೊಂದು ವಸತಿ ಸಮುಚ್ಚಯ ನಿರ್ಮಿಸಬೇಕೆಂಬ ಹಂಬಲ ಇತ್ತು . ಅಂತೆಯೇ ಈ ಅಪಾರ್ಟ್ಮೆಂಟ ನಿರ್ಮಾಣಗೊಂಡು ವಸತಿಗೆ ಯೋಗ್ಯವಾಗಿದೆ. ಸಕಲ ಸೌಲಭ್ಯಗಳು ಈ ವಸತಿ ಸಮುಚ್ಚಯದಲ್ಲಿದ್ದು ಇದರ ಫಲಾನುಭವಿಗಳಿಗೆ ಒಳಿತಾಗಲಿ ಎನ್ನುವ ಸದುದ್ದೇಶ ನನ್ನದು. ಸರ್ವರ ಉಪಸ್ಥಿತಿ ಹರ್ಷ ತಂದಿದೆ ಎಂದರು.
ಚೈತ್ರಾ ರಾಮಾಕಾಂತ ನಾಯಕ ಪ್ರಾರ್ಥಿಸಿದರು. ಹಿರಿಯ ಉಪನ್ಯಾಸಕ ಮಹೇಶ ನಾಯಕ,ಶಿಕ್ಷಕ ಬಾಲಚಂದ್ರ ನಾಯಕ , ಕೆ.ವಿ ನಾಯಕರ ಪುತ್ರಿ ನಮ್ರತಾ ನಾಯಕ, ಪತ್ರಕರ್ತ ಸುಭಾಷ್ ಕಾರೇಬೈಲ್ ಪರಿಚಯಿಸಿದರು.
ಈ ಅಪಾರ್ಟಮೆಂಟ ವಾಸ್ತುಶಿಲ್ಪಿ ರಾಮ ಮನೋಹರ, ಸೈಟ್ ಇಂಜಿನಿಯರ್ ಸೂರಜ್ ನಾಯ್ಕ್, ವ್ಯವಸ್ಥಾಪಕ ಯೋಗೇಶ ನಾಯಕರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜೇಶ ಮಾಸ್ತರ ಸೂರ್ವೆ ಕಾರ್ಯಕ್ರಮ ನಿರ್ವಹಿಸಿದರು ಸುಭಾಷ ಕಾರೇಬೈಲ್ ವಂದಿಸಿದರು. ಸುಶೀಲಾ ನಾಯಕ, ವಿಶ್ವಜಿತ್ ನಾಯಕ, ಚೇತನಾ ನಾಯಕ, ಅರುಲ್, ಅಪ್ರತಿ ಸಹಕರಿಸಿದರು.ಜಿಲ್ಲೆಯ ವಿವಿಧ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು