ನೈತಿಕ ಸಂದೇಶ ಸಾರುವ ದಸರಾ ಗೊಂಬೆಗಳು; ಗಮನ ಸೆಳೆದ ವಕೀಲರ ಮನೆಯ ಗೊಂಬೆಗಳು


ಅಂಕೋಲಾ: ತಾಲ್ಲೂಕಿನ ಕಾಕರಮಠದಲ್ಲಿ ವಕೀಲರೊಬ್ಬರು ಪ್ರತಿವರ್ಷ ದಸರಾ ಹಬ್ಬದ ನಿಮಿತ್ತ ಮನೆಯಲ್ಲಿ ಗೊಂಬೆಗಳ ಪ್ರದರ್ಶನವನ್ನು ಏರ್ಪಡಿಸಿದ್ದು, ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ.
ವಕೀಲ ನಿರಂಜನ ಪ್ರಸಾದ ಮತ್ತು ಕುಟುಂಬ ಕಳೆದ ಮೂರು ವರ್ಷಗಳಿಂದ ದಸರಾ ಹಬ್ಬದ ನಿಮಿತ್ತ ಗೊಂಬೆಗಳ ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದೆ. ಕನ್ನಡ ನಾಡಿನ ವಿಶೇಷ ಹಬ್ಬವಾಗಿರುವ ದಸರಾದಲ್ಲಿ ಗೊಂಬೆಗಳ ಮೂಲಕ ಸಂಸ್ಕೃತಿ ಸಂಸ್ಕಾರ ಮತ್ತು ಸತ್ಕಾರ್ಯಗಳ ಪರಿಚಯ ಮಾಡುವುದು ಅವರ ಪ್ರಮುಖ ಉದ್ದೇಶವಾಗಿದೆ.
ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳು ಮತ್ತು ನೀತಿ ಕಥೆಗಳ ಮೂಲಕ ಯುವ ಪೀಳಿಗೆಯ ಉನ್ನತೀಕರಣವಾಗಬೇಕು ಎಂಬುದು ಅವರ ಅಪೇಕ್ಷೆಯಾಗಿದೆ.

ನವರಾತ್ರಿ ಆರಂಭದ ದಿನ ಆರಾಧ್ಯ ದೇವಿಯಾಗಿರುವ ಶ್ರೀ ಚಾಮುಂಡೇಶ್ವರಿಯ ಕಳಶ ಪ್ರತಿಷ್ಠಾಪಿಸಿ ಗೊಂಬೆಗಳ ಪ್ರದರ್ಶನ ಆರಂಭಿಸುತ್ತಾರೆ. ನವರಾತ್ರಿಯ 9 ದಿನಗಳಲ್ಲಿ ವಕೀಲ ನಿರಂಜನ್ ಪ್ರಸಾದ್ ಅವರು ತಮ್ಮ ಮಗಳು ಶುಕ್ಲಾ ನಿರಂಜನ ಪ್ರಸಾದ್ ಅವರಿಗೆ 9 ರೀತಿಯ ವೇಷಭೂಷಣಗಳ ಅಲಂಕಾರ ಮಾಡಿಸಿ ಪ್ರದರ್ಶನಕ್ಕೆ ಬಂದ ವೀಕ್ಷಕರಿಗೆ ಗೊಂಬೆಗಳ ಬಗ್ಗೆ ಮಾಹಿತಿ ನೀಡುವಂತೆ ತರಬೇತಿ ನೀಡಿರುವುದು ವಿಶೇಷವಾಗಿದೆ. ಪತ್ನಿ ರೇಷ್ಮಾ ಅವರ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಮೈಸೂರು ಬೆಂಗಳೂರು ಮತ್ತು ಚನ್ನಪಟ್ಟಣ ಸೇರಿದಂತೆ ವಿವಿಧ ಪ್ರದೇಶಗಳ ಗೊಂಬೆ ಅವರ ಸಂಗ್ರಹದಲ್ಲಿದೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಪ್ರತಿ ವರ್ಷ ಗೊಂಬೆಗಳನ್ನು ಖರೀದಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಪ್ರದರ್ಶನ ವೀಕ್ಷಿಸಲು ಬರುವವರಿಗೆ ಸಿಹಿ ವಿತರಿಸಿ ಅರಿಶಿನ ಕುಂಕುಮ ನೀಡಲಾಗುತ್ತದೆ.


ಐದು ಹಂತಗಳಲ್ಲಿ ಗೊಂಬೆಗಳ ಪ್ರದರ್ಶನವನ್ನು ಸಜ್ಜುಗೊಳಿಸಲಾಗಿದೆ. ಪ್ರತಿಯೊಂದು ಗೊಂಬೆಗಳ ಪ್ರದರ್ಶನದ ಉದ್ದೇಶ ಮತ್ತು ಹಿನ್ನೆಲೆಯನ್ನು ವಕೀಲ ನಿರಂಜನ್ ಪ್ರಸಾದ್ ಮತ್ತು ಅವರ ಮಗಳು ಶುಕ್ಲಾ ನಿರರ್ಗಳವಾಗಿ ವಿವರಿಸುತ್ತಾರೆ.
ಭಕ್ತ ಪ್ರಹ್ಲಾದ, ವಿಷ್ಣುವಿನ ದಶಾವತಾರ, ಬೇಡರ ಕಣ್ಣಪ್ಪ, ಚಾಮುಂಡೇಶ್ವರಿ, ಶ್ರವಣಕುಮಾರ, ಭಕ್ತ ಮಾರ್ಕಂಡಯ್ಯ, ಪಾಂಡವರ ತೊಟ್ಟಿಲು, ಭೀಷ್ಮನ ಇಚ್ಚಾಮರಣದ ಸನ್ನಿವೇಶ, ಅಷ್ಟಲಕ್ಷ್ಮಿ, ನವದುರ್ಗೆಯರು, ಆತ್ಮಲಿಂಗ ಹೀಗೆ ಪೌರಾಣಿಕ ಮತ್ತು ಐತಿಹಾಸಿಕ ಸಂದೇಶ ಸಾರುವ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ರಕ್ತ ದಾನಕ್ಕೆ ಕೈಜೋಡಿಸುವಂತೆ ವಿನಂತಿಯ ಗೊಂಬೆಗಳು ಇಲ್ಲಿವೆ.
ಅಕ್ಟೋಬರ್ 23ರವರೆಗೆ ಈ ವರ್ಷದ ಗೊಂಬೆಗಳ ಪ್ರದರ್ಶನ ನಡೆಯಲಿದ್ದು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯ ಗೊಂಬೆಗಳ ಪ್ರದರ್ಶನ ಮತ್ತು ಅವುಗಳು ತಿಳಿಸುವ ನೈತಿಕ ಕಥೆಗಳ ಅಂಶಗಳನ್ನು ಮೈಗೂಡಿಸಿಕೊಳ್ಳಲು ಹೆಚ್ಚೆಚ್ಚು ಸಂಖ್ಯೆಯಲ್ಲಿ ಆಗಮಿಸಿದರೆ ಈ ಕಾರ್ಯಕ್ಕೆ ಅರ್ಥ ಬರುತ್ತದೆ ಎಂದು ವಕೀಲ ನಿರಂಜನ್ ಪ್ರಸಾದ್ ಅಭಿಪ್ರಾಯ ಪಡುತ್ತಾರೆ.