ಜನಾಕರ್ಷಣೆಯ ಕೇಂದ್ರವಾದ ಸುಕ್ರಜ್ಜಿ ಮನೆಯಂಗಳದ ಕಲಾ ಗ್ಯಾಲರಿ

ಅಂಕೋಲಾ: ಅಪ್ಪಟ ಸಾಂಪ್ರದಾಯಿಕ ಹಾಲಕ್ಕಿ ಜನಾಂಗದ ಸಾಂಸ್ಕೃತಿಕ ಉಡುಗೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದಂತೆ ದೇಶದಾದ್ಯಂತ ಕೇಂದ್ರ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇವರ್ಯಾರು? ಸಾಧನೆ ಏನು? ಎನ್ನುತ್ತಾ ಸಂಚಲನ ಸೃಷ್ಟಿಸಿದ ಪ್ರಶಸ್ತಿ ವಿತರಣೆಯ ಸಂಭ್ರಮವನ್ನು ಕಣ್ತುಂಬಿಕೊಂಡು ರೋಮಾಂಚನಗೊಂಡ ಜನರು ಜಾಲತಾಣಗಳಲ್ಲಿ ಹುಡುಕಾಟ ಆರಂಭಿಸಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಒಂದು ಕ್ಷಣ ಪ್ರಶಸ್ತಿ ವಿತರಿಸುತ್ತ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದರು.
ಹೌದು, ಕರ್ನಾಟಕ ಜಾನಪದ ಲೋಕದ ಕೋಗಿಲೆಯಾಗಿ ಅಂಕೋಲಾ ತಾಲೂಕಿನ ಜನಮಾನಸದಲ್ಲಿ ಪ್ರೀತಿಯ ಅಜ್ಜಿಯಾಗಿ, ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ವಿಶ್ವವಿದ್ಯಾಲಯದ ಸಂದರ್ಶಕ ಶಿಕ್ಷಕರಾಗಿ ಚಿರಪರಿಚಿತರಾಗಿರುವವರು ಪದ್ಮಶ್ರೀ ಸುಕ್ರೀಗೌಡ.

ಶಿಕ್ಷಣ ಪಡೆಯದೆ ಪೂರ್ವಜರಿಂದ ಬಳುವಳಿಯಾಗಿ ಬಂದ ಸಾವಿರಾರು ಜನಪದ ಹಾಡುಗಳನ್ನು ಏಳು ದಶಕಗಳ ಕಾಲ ನಾಡಿನಾದ್ಯಂತ ಮೊಳಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಸಮಾಜ ಸೇವೆ, ಜಾನಪದ ಕಲೆ, ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಪ್ರೀತಿಗೆ ಹತ್ತಿರವಾದವರು ಸುಕ್ರೀಗೌಡ. ನಿತ್ಯವೂ ದೇಶದ ರಾಜ್ಯದ ವಿವಿಧ ಮೂಲಗಳಿಂದ ಅವರನ್ನು ಕಾಣಲು, ಕಂಡು ಫೋಟೋ ಕ್ಲಿಕ್ಕಿಸಿಕೊಳ್ಳಲು ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಅವರ ಮನೆಗೆ ಅಭಿಮಾನಿಗಳು ಬರುವುದು ಸಹಜವಾಗಿದೆ. ಬಂದವರ ಕುತೂಹಲ ತಣಿಸಲು, ಸುಕ್ರಜ್ಜಿಯ ಸಾಧನೆಯ ಯಶಸ್ಸಿನ ಯಾನವನ್ನು ವಿವರಿಸಲು ಮನೆಯ ಮುಂದೊಂದು ಸುಕ್ರಜ್ಜಿ ಆರ್ಟ್ ಗ್ಯಾಲರಿ ನಿರ್ಮಾಣವಾಗಿದ್ದು, ಜನಾಕರ್ಷಣೆಗೆ ಕಾರಣವಾಗಿದೆ.

ಬೆಂಗಳೂರಿನ ಎಚ್ ಎನ್ ರಾಜೇಶ್ ಅವರ ಪರಿಕಲ್ಪನೆಯಲ್ಲಿ ಆರ್ಟ್ ಗ್ಯಾಲರಿಯ ನೀಲನಕ್ಷೆ ಸಿದ್ಧವಾಗಿ, ಆದಿಚುಂಚನಗಿರಿ ಮಠದ ಸಹಯೋಗದಲ್ಲಿ ವಿಭಿನ್ನವಾಗಿ ನಿರ್ಮಾಣಗೊಂಡಿದೆ. ಸುಕ್ರಜ್ಜಿಯ ಜಾನಪದ ಹಾಡುಗಳ ಪಯಣದ ಬದುಕು ಮತ್ತು ಅವುಗಳ ಕುರಿತ ಸಾಹಿತ್ಯ, ಪದ್ಮಶ್ರೀ ನಾಡೋಜ ರಾಜ್ಯೋತ್ಸವ ಜನಪದಶ್ರೀ ಸೇರಿದಂತೆ ನೂರಾರು ಪ್ರಶಸ್ತಿಗಳ ನೆನಪನ್ನು ಈ ಆರ್ಟ್ ಗ್ಯಾಲರಿಯಲ್ಲಿ ಕಟ್ಟಿಕೊಡಲಾಗಿದೆ. ಸಾಂಸ್ಕೃತಿಕ ಲೋಕದ ನೆನಪುಗಳೊಂದಿಗೆ, ಸಾರಾಯಿ ವಿರೋಧಿ ಹೋರಾಟ, ಅರಣ್ಯ ಅತಿಕ್ರಮಣ ಸಕ್ರಮ ಹೋರಾಟ ಮತ್ತು ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತ ಹೋರಾಟದ ಅಂಶಗಳು ಇಲ್ಲಿ ನಮೂದಿಸಲ್ಪಟ್ಟಿವೆ.

ಅಂಕೋಲೆಯ ಪ್ರೀತಿಯ ಸುಕ್ರಜ್ಜಿ, ಹಾವೇರಿಯ ಜಾನಪದ ವಿಶ್ವವಿದ್ಯಾಲಯ, ಧಾರವಾಡ ಮಂಗಳೂರು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಮತ್ತು ಪಿ ಎಚ್ ಡಿ ವಿದ್ಯಾರ್ಥಿಗಳಿಗೆ ಬೋಧಿಸಿದ ಬದುಕಿನ ಅನುಭವದ ಪಾಠ, ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಸಲ್ಲಿಸಿದ ಸೇವೆಯ ನೆನಪುಗಳ ಹೂರಣ ಇಲ್ಲಿದೆ.

ಪದ್ಮಶ್ರೀ ಸುಕ್ರಿ ಗೌಡ ಅವರನ್ನು ಸಂದರ್ಶಿಸಲು, ಅವರ ಕುರಿತು ಅಧ್ಯಯನ ಮಾಡಲು, ಗೌರವಿಸಲು, ನಿರರ್ಗಳವಾದ ಜನಪದ ಶೈಲಿಯ ಹಾಡುಗಳ ಸವಿ ಸವಿಯಲು ನೂರಾರು ಉಪನ್ಯಾಸಕರು ಪ್ರಾಧ್ಯಾಪಕರು ಸಾಹಿತಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಅವರ ಮನೆಗೆ ಬರುತ್ತಾರೆ. ಸಾಧನೆಗಳ ಸಂಪೂರ್ಣ ಮಾಹಿತಿ ಅವರಿಗೆ ದೊರೆಯುವಂತೆ ಈ ಆರ್ಟ್ ಗ್ಯಾಲರಿ ನಿರ್ಮಿಸಲಾಗಿದೆ ಎಂದು ಹಾಲಕ್ಕಿ ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ. ಶ್ರೀಧರ್ ಗೌಡ ಅಭಿಪ್ರಾಯ ಪಡುತ್ತಾರೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಚಿತ್ರ ಕಲಾವಿದ ಮುಕ್ಕುಂದ ಗೌಡರ ವರ್ಣಲಂಕಾರವು ಗ್ಯಾಲರಿಯ ಅಂದವನ್ನು ಹೆಚ್ಚಿಸಿದೆ.

ಪದ್ಮಶ್ರೀ ಸುಕ್ರೀಗೌಡ ಅಂಕೋಲಾದ ಹೆಮ್ಮೆ. ಜಿಲ್ಲೆಯ ಮತ್ತು ರಾಜ್ಯದ ಗರಿಮೆ. ವಿವಿಧ ಸಂಘ-ಸಂಸ್ಥೆಗಳು ಮತ್ತು ಆದಿಚುಂಚನಗಿರಿ ಮಠದ ಈ ಕಾರ್ಯದಿಂದ ಅವರ ಬದುಕಿನ ಯಾನ ಮುಂದಿನ ಪೀಳಿಗೆಗೆ ಗಾನವಾಗಲಿದೆ. ಸುಕ್ರಜ್ಜಿಯ ಹೆಸರಿನಲ್ಲಿ ಜಾನಪದ ಸಂಶೋಧನಾ ಕೇಂದ್ರವೊಂದು ತಾಲೂಕಿನಲ್ಲಿ ನಿರ್ಮಾಣವಾಗಲಿ ಎಂಬುದು ಇಲ್ಲಿನ ಬಹುಜನರ ಬೇಡಿಕೆಯಾಗಿದೆ.