ಅಂಕೋಲಾ : ವಿವಿಧ ಇಲಾಖೆಗಳು ಅವಶ್ಯವಿರುವ ಕಾಮಗಾರಿಗೆ ಮಾತ್ರ ಕ್ರಿಯಾ ಯೋಜನೆ ರೂಪಿಸಿ ಎಂದು
ತಾ.ಪಂ. ಆಡಳಿತಾಧಿಕಾರಿ ನಾಗೇಶ ರಾಯ್ಕರ ಹೇಳಿದರು. ಅವರು ತಾ.ಪಂ. ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಲವು ಇಲಾಖೆಗಳಲ್ಲಿ ತಾ.ಪಂ. ಅನುದಾನದ ಹೊರತಾಗಿ ಸರಕಾರದ ಇತರ ಮೂಲಗಳಿಂದಲೂ ಅನುದಾನ ಬರುತ್ತದೆ. ಹೀಗಿರುವಾಗ ತಾ.ಪಂ ಅನುದಾನದಲ್ಲಿ ನಿರ್ದಿಷ್ಠ ಕಾಮಗಾರಿಗೆ ಅವಶ್ಯವಿದ್ದರೆ ಮಾತ್ರ ಕ್ರಿಯಾಯೋಜನೆ ರೂಪಿಸಿ ಇಲ್ಲವಾದರೆ ಒಂದೇ ಕಾಮಗಾರಿಗೆ ಎರಡು ಕಡೆ ಅನುದಾನಗಳು ಮಂಜೂರಾಗಿ ವ್ಯರ್ಥವಾಗುವ ಸಾಧ್ಯತೆ ಇರುತ್ತದೆ. ಕ್ರಿಯಾ ಯೋಜನೆಯಲ್ಲಿ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಆದ್ಯತೆ ನೀಡಿ ಎಂದರು. ಅಲ್ಲದೆ ಸರಕಾರದ ಯೋಜನೆಗಳು ಜನರಿಗೆ ತಲುಪಲು ಇಲಾಖೆಗಳು ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ಸೂಚಿಸಿದರು. ಹೊಸ ಹೊಸ ಸಾಂಕ್ರಾಮಿಕ ರೋಗಗಳ ಕುರಿತು ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆಗೆ ಸಲಹೆ ನೀಡಿದರು.
ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ ನಾಯ್ಕ ಮಾತನಾಡಿ ತಾಲೂಕಿನ್ನು ಬರಪೀಡಿತ ತಾಲೂಕೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಈಗಾಗಲೇ ಬರಗಾಲದ ಹಾನಿಯ ಕುರಿತು ಸರ್ವೆ ನಡೆಸಿ ವರದಿ ನೀಡಲಾಗಿದೆ. ಸುಮಾರು 1600 ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ವಿಶೇಷವೆಂದರೆ ಪಿ ಎಂ ಕಿಸಾನ ಯೋಜನೆಯ ಶೇ.95 ರಷ್ಟು ಫಲಾನುಭವಿಗಳ ಇ-ಕೆವೈಸಿ ಮಾಡಲಾಗಿದೆ ಇದು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಎಂದರು.
ಮೀನುಗಾರರಿಗೆ ಮನೆ ಕಟ್ಟಿಕೊಳ್ಳಲು ಜಮೀನಿನ ಕಾಗದ ಪತ್ರಗಳು ಮತ್ತು ನಕ್ಷೆ ಮುಂತಾದ ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರೆನಿಟಾ ಡಿಸೋಜಾ ಹೇಳಿದರು. ಶಿಕ್ಷಣ ಇಲಾಖೆಯ ಕ್ರಿಯಾಯೋಜನೆಯಲ್ಲಿ ತಾಲೂಕಿನಾದ್ಯಂತ ವಿವಿಧ ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ ದುರಸ್ತಿ ಮುಂತಾದ ಕಾಮಗಾರಿಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ವಿವರಿಸಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ ಸಾಮಾನ್ಯ ಸಭೆಯನ್ನು ನಿರ್ವಹಿಸಿದರು.
ಇಂಧನ ಭರಿಸಲೂ ಹಣವಿಲ್ಲದೆ 4 ತಿಂಗಳಿಂದ ನಿಂತಿರುವ ಸರಕಾರಿ ವಾಹನ.
ತಾಲೂಕಿನ ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಕಳೆದ 4 ತಿಂಗಳಿಂದ ಆಡಳಿತ ನಿರ್ವಹಣೆಗೆ ಅನುದಾನ ಬಾರದೆ ನಿರ್ವಹಣೆಗೆ ತೊಂದರೆಯಾಗುತ್ತಿದೆ. ಇಂಧನ ಭರಿಸಲು ಹಣವಿಲ್ಲದೆ ವಾಹನವನ್ನು ನಿಲ್ಲಿಸಿಡಲಾಗಿದೆ. ಕಾರ್ಯಾಲಯದ ಭಾಡಿಗೆ ಬಾಕಿಯಾಗಿದೆ. ಅಂಗನವಾಡಿಗಳಿಗೆ ಮೆಡಿಸಿನ್ ಕಿಟ್ ಕೊಡಿಸಲು ಆಗುತ್ತಿಲ್ಲ ಇನ್ನೂ ಹಲವಾರು ಸಮಸ್ಯೆಗಳು ಎದುರಾಗಿವೆ ಎಂದು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಸವಿತಾ ಶಾಸ್ತ್ರಿಮಠ ಸಾಮಾನ್ಯ ಸಭೆಯಲ್ಲಿ ತಮ್ಮ ಇಲಾಖೆಯ ಅಸಹಾಯಕತೆಯನ್ನು ಹೇಳಿಕೊಂಡರು.