ಅಂಕೋಲಾ : ಬೆಂಗಳೂರಿನಲ್ಲಿ ಗುತ್ತಿಗೆದಾರರೋರ್ವರ ಮನೆಯಲ್ಲಿ ಐಟಿ ದಾಳಿಯಲ್ಲಿ 42 ಕೋಟಿ ಅಕ್ರಮ ನಗದು ವಶವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಿಜೆಪಿ ಅಂಕೋಲಾ ಮಂಡಲ ವತಿಯಿಂದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ಈ ಪ್ರಕರಣ ಸಂಬಂಧ ಹೊಣೆಗಾರರನ್ನಾಗಿ ಮಾಡಿ ತಕ್ಷಣ ರಾಜೀನಾಮೆ ನೀಡಬೇಕೆಂದು ಜೈ ಹಿಂದ್ ಸರ್ಕಲ್ ನಲ್ಲಿ ಹಾಗೂ ತಹಸಿಲ್ದಾರ್ ಕಚೇರಿ ಎದುರು ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಹಾಗೂ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಮಂಡಲ ಅಧ್ಯಕ್ಷ ಸಂಜಯ ನಾಯ್ಕ ಪ್ರಸ್ತಾವಿಕ ಮಾತನಾಡಿ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಬೆಂಗಳೂರಿನ ಗುತ್ತಿಗೆದಾರನ ಮನೆಯಲ್ಲಿ 42 ಕೋಟಿ ಸಿಕ್ಕಿದೆ ಇದ್ದಕ್ಕೆರಾಜ್ಯ ಸರಕಾರವೇ ನೇರ ಹೊಣೆ. ಕಾಂಗ್ರೆಸ್ ಸರ್ಕಾರ ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಬೇಕು. ರಾಜ್ಯ ಸರ್ಕಾರ ದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ರಾಜೇಂದ್ರ ನಾಯ್ಕ ಕಾಂಗ್ರೆಸ್ ಸರಕಾರ ಹಾಗೂ ಶಾಸಕರ ವಿರುದ್ಧ ಹರಿಹಾಯ್ದು ಉಚಿತ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಘೋಷಿಸಿದೆ ಆದರೆ ಇನ್ನೂವರೆಗೂ ಸರಿಯಾಗಿ ಅನುಷ್ಠಾನಗೊಳಿಸಲಿಲ್ಲ, ಜನರಿಂದ ವಿವಿಧ ರೀತಿಯಲ್ಲಿ ಸರ್ಕಾರ ಹಣ ದೋಚುತ್ತಿದೆ. ರೈತರಿಗೆ ಕಣ್ಣೀರು ಹರಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಬಿಜೆಪಿ ಸರಕಾರದ ಮೇಲೆ ಸುಳ್ಳು ಆಪಾದನೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಕಮೀಶನ್ ಧಂದೆಯ ಅಸಲೀ ಮುಖ ಈಗ ಬಯಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಮುಖರು ಭಾಸ್ಕರ ನಾರ್ವೇಕರ ಮಾತನಾಡಿ ಪಂಚ ರಾಜ್ಯ ಚುನಾವಣೆಗೆ ಕಾಂಗ್ರೆಸ್ಸಿನ ಎಲ್ಲಾ ಸಚಿವರು ಶಾಸಕರು ಕಮಿಷನ್ ಸಂಗ್ರಹಿಸುತ್ತಿರುವ ಕಾಂಗ್ರೆಸ್ 80% ಸರಕಾರ ಎಟಿಎಮ್ ಸರಕಾರ ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾ ಎಸ್ ಸಿ ಮೋರ್ಚಾ ಪ್ರಭಾರಿ ಜಗದೀಶ ನಾಯಕ ಮೊಗಟಾ ಮಾತನಾಡಿ ಹಿಂದೆ ಬಿಜೆಪಿಗೆ 40% ಆರೋಪ ಮಾಡಲಾಗಿತ್ತು. ಮಾಡಿದ ಆರೋಪಕ್ಕೆ ಕಾಂಗ್ರೆಸ್ ಯಾವುದೇ ಒಂದು ಆಧಾರ ಕೂಡ ನೀಡಿಲ್ಲ. ಈಗ ಕಾಂಗ್ರೆಸ್ 80% ಹಣ ಪಡೆಯುತ್ತಿದೆ ಎಂದು ಜನರೇ ಹೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಮೇಲೆ ತಕ್ಷಣ ರಾಜ್ಯಪಾಲರು ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಅಂಕೋಲಾ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಭಟ್, ಮಾರುತಿ ಗೌಡ, ರಾಜ್ಯ ಮೀನುಗಾರ ಪ್ರಕೋಷ್ಟದ ಸದಸ್ಯರಾದ ಹುವಾ ಖಂಡೇಕರ, ಹಾಗೂ ಬಿಜೆಪಿ ಜಿಲ್ಲಾ ಪ್ರಮುಖರು, ಪುರಸಭೆ ಸದಸ್ಯರು, ಮಾಹಾಶಕ್ತಿ ಹಾಗೂ ಶಕ್ತಿ ಕೇಂದ್ರದ ಅಧ್ಯಕ್ಷರು ಗ್ರಾ ಪಂ ಅಧ್ಯಕ್ಷರು, ಸದಸ್ಯರು, ಮೋರ್ಚಾದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.