ಕಾಂಗ್ರೆಸ್ ಮುಖಂಡರ ಕೃಪೆಯಲ್ಲೇ ತಲೆ ಎತ್ತುತ್ತಿರುವ ಮರಳು ಮಾಫಿಯಾ – ಸೂಕ್ತ ಕ್ರಮಕ್ಕೆ ರೂಪಾಲಿ ನಾಯ್ಕ ಆಗ್ರಹ


ಕಾಳಿ ನದಿ ತೀರದಲ್ಲಿ ಸೆಪ್ಟೆಂಬರ್ 13ರಂದು ವಶಪಡಿಸಿಕೊಂಡ ಅಕ್ರಮ ಮರಳನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಗುತ್ತಿಗೆದಾರರು ಹಾಗೂ ಬಿಲ್ಡರ್‌ಗಳಿಗೆ ಮಾರಾಟ ಮಾಡಿರುವ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.

ಕಾನೂನು ಪಾಲಿಸಬೇಕಾದ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇಯ್ದಂತೆ ಈ ಪ್ರಕರಣದಿಂದ ಮರಳು ಮಾಫಿಯಾದೊಂದಿಗೆ ಕೈಜೋಡಿಸಿದ್ದಾರೆಯೇ ಎಂಬ ಅನುಮಾನ ಉಂಟಾಗುತ್ತಿದೆ. ಕಾರವಾರದ ಸಹಾಯಕ ಆಯುಕ್ತೆ ಜಯಲಕ್ಷ್ಮೀ ರಾಯಕೋಡ ನೇತೃತ್ದಲ್ಲಿ ಅಧಿಕಾರಿಗಳ ತಂಡ ಕಾಳಿ ನದಿ ತೀರದಲ್ಲಿ ಸೆ. 13ರಂದು ವಶಪಡಿಸಿಕೊಂಡ ಅಕ್ರಮ ಮರಳನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದ್ರೆ ಈ ಇಲಾಖೆಯ ಅಧಿಕಾರಿ ಕಾನೂನನ್ನು ಗಾಳಿಗೆ ತೂರಿ ತರಾತುರಿಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಳನ್ನು ಕೇವಲ 30-35 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಇದು ಸಹಾಯಕ ಆಯುಕ್ತರ ಗಮನಕ್ಕೆ ಇದೆಯೇ ಇಲ್ಲವೇ ಎನ್ನುವುದೂ ತಿಳಿಯಬೇಕಾಗಿದೆ ಎಂದು ರೂಪಾಲಿ ನಾಯ್ಕ ಹೇಳಿದ್ರು..

ಮರಳು ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಲ್ಲದೆ, ಭ್ರಷ್ಟಾಚಾರದ ಸಾಧ್ಯತೆಯನ್ನೂ ಹುಟ್ಟುಹಾಕಿದೆ. ಬಿಲ್ಡರ್ ಒಬ್ಬರ ಜೊತೆ ಸೇರಿಕೊಂಡು ಗುತ್ತಿಗೆದಾರರೊಬ್ಬರಿಗೆ ಮರಳು ಮಾರಾಟ ಮಾಡಿರುವದರ ಹಿಂದೆ ಕಾಂಗ್ರೆಸ್ ಮುಖಂಡರೇ ಶಾಮೀಲಾಗಿರುವ ಆರೋಪ ಕೇಳಿಬರ್ತಿದೆ. ಅದಿಲ್ಲದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಹಿರಂಗಪಡಿಸಿ ಸೂಕ್ತ ಕ್ರಮಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ರು…

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಬಡ ಜನತೆ ಮರಳು ಸಿಗದೆ ಪರದಾಡುತ್ತಿದ್ದಾರೆ. ನಿಷೇಧದ ನೆಪದಲ್ಲಿ ಅಧಿಕಾರಿಗಳು ಮರಳು ಮಾಫಿಯಾದೊಂದಿಗೆ ಸೇರಿಕೊಂಡು ವ್ಯವಹಾರಕ್ಕೆ ಇಳಿದಿದ್ದಾರೆ. ಜನಪ್ರತಿನಿಧಿಗಳಿರುವಾಗ ಅವರ ಕುಮ್ಮಕ್ಕಿಲ್ಲದೆ ಅಧಿಕಾರಿಗಳು ರಾಜಾರೋಷವಾಗಿ ಈ ರೀತಿ ಮರಳನ್ನು ಮಾರಾಟ ಮಾಡಲು ಸಾಧ್ಯವೇ. ಹಾಗಿದ್ರೆ ಇದಕ್ಕೆ ಯಾರೆಲ್ಲ ಕುಮ್ಮಕ್ಕು ನೀಡಿದ್ದಾರೆ. ಯಾರ ಕೃಪೆ ಇದೆ ಎನ್ನುವುದು ಹೊರಬೀಳಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ…

ಮರಳು ಮಾಫಿಯಾದಿಂದ ಸರ್ಕಾರದ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸುವವರಿಗೆ, ಬಡವರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಉಳ್ಳವರಿಗೆ ರಾತ್ರೋ ರಾತ್ರಿ ಮರಳನ್ನು ಕಡಿಮೆ ಹಣಕ್ಕೆ ಮಾರಾಟ ಮಾಡುವ ಅಧಿಕಾರಿಗಳು, ಬಡವರ ಮೇಲೆ ಮಾತ್ರ ಕಾನೂನು ಹೇರುತ್ತಿದ್ದಾರೆ. ನಾನು ಶಾಸಕಿಯಾಗಿದ್ದಾಗ ಸಾರ್ವಜನಿಕರಿಗೆ ಮರಳು ದೊರೆಯುವಂತೆ ಮಾಡಲು ಅಂದಿನ ಮುಖ್ಯಮಂತ್ರಿಗಳು, ಗಣಿ ಹಾಗೂ ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೆ. ಕಾಳಿ ನದಿಯಲ್ಲಿ ಸಿಆರ್ ಝಡ್ ವಲಯದ ಬಗ್ಗೆ ಪುನಃ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದೆ…

ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಕಮಿಶನ್, ಭ್ರಷ್ಟಾಚಾರ ಮಿತಿಮೀರಿದೆ. ಕಾರವಾರದಲ್ಲಿ ಅಪಾರ್ಟಮೆಂಟ್‌ಗಳ ನಿರ್ಮಾಣಕ್ಕೂ ಪರವಾನಿಗೆ ನೀಡುವಲ್ಲಿ ಕಮಿಶನ್‌ಗಾಗಿ ಒತ್ತಡ ಹೇರುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಇದರಿಂದ ನಗರದ ಅಭಿವೃದ್ಧಿಗೆ ತೀವ್ರ ಹಿನ್ನಡೆ ಉಂಟಾಗಲಿದೆ. ಪ್ರತಿಯೊಂದರಲ್ಲೂ ಕಮಿಶನ್, ಭ್ರಷ್ಟಾಚಾರ ಎಲ್ಲೆ ಮೀರಿದೆ. ಈ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ ಎಂದು ರೂಪಾಲಿಯವರು ಆಕ್ರೋಶ ವ್ಯಕ್ತಪಡಿಸಿದ್ರು…

ನುಡಿಸಿರಿ ನ್ಯೂಸ್‌, ಕಾರವಾರ