ದಾಂಡೇಲಿ ಕಾಳಿ ನದಿಯಿಂದ ನೀರು ಕೊಂಡೊಯ್ಯುವ ಪೈಪ್ಲೈನ್ ಕಾಮಗಾರಿಯನ್ನು ಹಳೆ ದಾಂಡೇಲಿಯ ಮುಖ್ಯ ರಸ್ತೆಯ ಬದಿಯಲ್ಲಿ ಮಾಡುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗ್ತಿದೆ. ಹೀಗಾಗಿ ಟಿಂಬರ್ ಡಿಪೋ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡುವಂತೆ ನಗರದ ಸಾರ್ವಜನಿಕರು ಪ್ರವಾಸಿ ಮಂದಿರದಲ್ಲಿ ನಗರಸಭೆಯ ಪೌರಾಯುಕ್ತರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ರು..
ಕಳೆದ 2-3 ವರ್ಷಗಳಿಂದ ಹಳೆ ದಾಂಡೇಲಿ ಭಾಗದ ಜನರು ನಿರಂತರವಾಗಿ ವಿವಿಧ ಪೈಪ್ಲೈನ್ ಕಾಮಗಾರಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಈಗಾಗಲೇ ರಸ್ತೆ ತೀವ್ರ ಹದಗೆಟ್ಟಿದ್ದು ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಹಳೆ ದಾಂಡೇಲಿಯ ಜನತೆ ಪ್ರತಿದಿನ ಧೂಳು ತಿನ್ನುವಂತಹ ದೌರ್ಭಾಗ್ಯದ ಸ್ಥಿತಿ ಎದುರಾಗಿದೆ.
ಹೀಗಿರುವಾಗ ಮತ್ತೊಂದು ಪೈಪ್ ಲೈನ್ ಕಾಮಗಾರಿ ಆರಂಭವಾಗಿದ್ದು, ಈ ಭಾಗದ ಜನತೆಯ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ. ಆದ್ರಿಂದ ಸದ್ಯದ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿ ಈಗ ನಡೆದಿರುವ ಪೈಪ್ ಲೈನ್ ಕಾಮಗಾರಿಯನ್ನು ಹಳೆದಾಂಡೇಲಿಯ ಟಿಂಬರ್ ಡಿಪೋ ಪ್ರದೇಶದ ಮೂಲಕ ಹಾದು ಹೋಗವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಅನಿಲ್ ನಾಯ್ಕರ್ ಮತ್ತು ಪೌರಾಯುಕ್ತರಾದ ಆರ್.ಎಸ್ ಪವಾರ್ ಅವರಿಗೆ ಮನವಿ ಸಲ್ಲಿಸಿದ್ರು.
ಇದೇ ವೇಳೆ ಶಾಸಕರಾದ ಆರ್.ವಿ ದೇಶಪಾಂಡೆ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ರು. ಶಾಸಕ ಆರ್.ವಿ ದೇಶಪಾಂಡೆ ಅವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರಸಭೆಯ ಪೌರಾಯುಕ್ತರಿಗೆ ಸೂಚನೆ ನೀಡಿದ್ರು…
ಸಂದೇಶ್ ಜೈನ್ ನುಡಿಸಿರಿ ನ್ಯೂಸ್, ದಾಂಡೇಲಿ