ಅಂಕೋಲಾದಲ್ಲಿ ಸಂಭ್ರಮದಿಂದ ನಡೆದ ಮೇರಿ ಮಾಟಿ ಮೇರಾ ದೇಶ ಅಮೃತ ಕಲಶ ಯಾತ್ರೆ ಕಾರ್ಯಕ್ರಮ.


ಅಂಕೋಲಾ : ದೇಶದ ಏಕತೆ ಮತ್ತು ಐಕ್ಯತೆಯ ಪ್ರತೀಕವಾಗಿ ಮೇರಿ‌ ಮಾಟಿ ಮೇರಾ ದೇಶ ಅಮೃತ ಕಲಶ ಯಾತ್ರೆ ಅಂಕೋಲಾ ತಾಲೂಕಾ ಮಟ್ಟದ ಕಾರ್ಯಕ್ರಮವು ಪಟ್ಟಣದಲ್ಲಿ ಸಂಭ್ರಮದಿಂದ ಜರುಗಿತು.
ತಾಲೂಕಾ ಪಂಚಾಯತ ಕಾರ್ಯಾಲಯದ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಗ್ರಾ. ಪಂಚಾಯತಗಳಿಂದ ಅಮೃತ ಕಲಶಗಳನ್ನು ತಂದು ಪಟ್ಟಣದ ಪ್ರಮುಖ ರಸ್ತೆಯಿಂದ ಮೆರವಣಿಗೆಯ ಮೂಲಕ ತರಲಾಯಿತು. ನಂತರ ಪ್ರತೀ ಗ್ರಾ.ಪಂ.ಗಳಿಂದ ತಂದಿರುವ ಕಲಶಗಳಿಂದ ಒಂದೊಂದು ಹಿಡಿ ಮಣ್ಣನ್ನು ತಾಲೂಕಾ ಮಟ್ಟದ ಅಮೃತ ಕಲಶಕ್ಕೆ ಸೇರಿಸಿ ಗೌರವ ಸಲ್ಲಿಸಲಾಯಿತು.


ಪಿಡಿಓ ನಾಗೇಂದ್ರ ನಾಯ್ಕ ಕೈಯಲ್ಲಿ ಮಿಟ್ಟಿ (ಮಣ್ಣು) ಹಿಡಿದುಕೊಂಡು ಭಾಗವಹಿಸಿದ ಎಲ್ಲರಿಗೂ “ಪಂಚಪ್ರಾಣ” ಪ್ರತಿಜ್ಞೆಯನ್ನು ಬೋಧಿಸಿದರು. ಸರ್ಕಾರಿ ನೌಕರರು ಮತ್ತು ಗ್ರಾಮ ಪಂಚಾಯತ್ ಮುಖಂಡರು ಭಾಗವಹಿಸಿ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಸಕ್ರಿಯವಾಗಿ ಭಾಗವಹಿಸಿ ದೇಶದ ಏಕತೆ ಮತ್ತು ಐಕ್ಯತೆಗಾಗಿ ಶ್ರಮಿಸುವುದಾಗಿ ಮತ್ತು
ವಸಾಹತುಶಾಹಿ ಆಡಳಿತದಿಂದ ಹೊರಬರಲು ತಮ್ಮ ಪರಮೋಚ್ಚ ಜೀವನವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸುವುದಾಗಿ ಭಾಗವಹಿಸುವವರು ಪ್ರತಿಜ್ಞೆ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾರತ ಸರಕಾರದ ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಯಶ್ವಂತ ಯಾದವ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ರಾಷ್ಟ್ರದಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದ್ದು ಅಂಕೋಲಾದ ಎಲ್ಲ ಗ್ರಾಮ ಪಂಚಾಯತಗಳು ಬಹಳ ಸಂಭ್ರಮದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ ಮಾತನಾಡಿ ಅಮೃತ್ ಮಹೋತ್ಸವದ ಆಚರಣೆಗಳೊಂದಿಗೆ ಹುತಾತ್ಮರಾದ ವೀರ ಪುರುಷ ಮತ್ತು ಮಹಿಳೆಯರನ್ನು ಗೌರವಿಸುವ ‘ಮೇರಿ ಮಾಟಿ ಮೇರಾ ದೇಶ್’ ಅಭಿಯಾನದ ಭಾಗವಾಗಿ, ನಮ್ಮ ಅಮರ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರದಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅವರ ಸ್ಮರಣೆಯನ್ನು ಅಜರಾಮರಗೊಳಿಸಲು, ದೇಶದಾದ್ಯಂತ ಲಕ್ಷಾಂತರ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಶಾಸನಗಳನ್ನು ಸ್ಥಾಪಿಸಲಾಗುವುದು.


ಈ ಅಭಿಯಾನವು ದೇಶಾದ್ಯಂತ ‘ಅಮೃತ ಕಲಶ ಯಾತ್ರೆ’ಗೆ ಸಾಕ್ಷಿಯಾಗಲಿದೆ, ಇದು ಭಾರತದ ಮೂಲೆ ಮೂಲೆಯಿಂದ ದೆಹಲಿಗೆ 7600 ಕಲಶಗಳಲ್ಲಿ ಮಣ್ಣನ್ನು ಸಾಗಿಸುತ್ತದೆ. ಈ ಪ್ರಯಾಣದಲ್ಲಿ ಮಣ್ಣಿನ ಜೊತೆಗೆ ದೇಶದ ವಿವಿಧ ಪ್ರದೇಶಗಳ ಸಸಿಗಳನ್ನೂ ಒಯ್ಯಲಾಗುವುದು. ಈ ಎರಡೂ ಅಂಶಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ವಾಟಿಕಾ’ ರಚಿಸಲು ಬಳಸಲಾಗುತ್ತದೆ, ಇದು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಭವ್ಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಪಿಡಿಓ ನಾಗೇಂದ್ರ ನಾಯ್ಕ ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಪಿಡಿಓ ಸಂದೀಪ‌ ಗಾಂವಕರ ವಂದಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಪಿ ಎಂ ಹೈಸ್ಕೂಲಿನ ಎನ್.ಸಿ.ಸಿ ಕಮಾಂಡರ ಜಿ ಆರ್ ತಾಂಡೇಲ, ವಿದ್ಯಾರ್ಥಿ ಕೆಡೇಟಗಳು ಉಪಸ್ಥಿತರಿದ್ದರು.