ವೇಶ್ಯಾವಾಟಿಕೆ: ಗಿರಾಕಿಗಳೊಂದಿಗೆ ಆರೋಪಿಗಳು ಪೊಲೀಸರ ವಶಕ್ಕೆ.

ಅಂಕೋಲಾ: ಮ್ಯಾಂಗನೀಸ್ ಅದಿರು ವ್ಯವಹಾರ ಸಂಬಂಧ ಹೈ ಪ್ರೊಫೈಲ್ ಪ್ರಕರಣಗಳ ಮೂಲಕ ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಅಂಕೋಲಾ ತಾಲೂಕಿನ ಬೇಲೆಕೇರಿ ಇದೀಗ ವೇಶ್ಯಾವಾಟಿಕೆ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದೆ.

ಬೇಲೆಕೇರಿಯ ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು, ಇಬ್ಬರು ಗಿರಾಕಿಗಳು ಮತ್ತು ಓರ್ವ ಸಂತ್ರಸ್ತೆಯನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಬಳ್ಳಾರಿ ಹೊಸಪೇಟೆಯ ಆಶ್ರಯ ಕಾಲೋನಿಯ ರಜಿಯಾ ಕಮಲಭಾಷಾ(38) ಮತ್ತು ಹೊನ್ನಾವರದ ಮಂಕಿ ಗ್ರಾಮದ ಚಿತ್ತಾರ ನಿವಾಸಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಸಂತೋಷ ಮಂಜುನಾಥ ನಾಯ್ಕ(27) ವೇಶ್ಯಾವಾಟಿಕೆ ನಡೆಸುತ್ತಿರುವ ಆರೋಪಿಗಳಾಗಿದ್ದಾರೆ.

ಬೆಂಗಳೂರು ಮೂಲದ ಮಹಿಳೆಯೋರ್ವರನ್ನು ಬೇಲೆಕೇರಿಯ ಬಾಡಿಗೆ ಮನೆಗೆ ಕರೆಸಿಕೊಂಡು ಹಣದ ಆಮಿಷವೊಡ್ಡಿ ಇಚ್ಚೆಗೆ ವಿರುದ್ಧವಾಗಿ ವೇಶ್ಯಾವಾಟಿಕೆ ದಂದೆಗೆ ತೊಡಗಿಸುವ ಪ್ರಯತ್ನ ನಡೆಸಿದ್ದರು. ಸಫಲ ಪ್ರಯತ್ನದ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿದೆ. ದಾಳಿಯ ಸಂದರ್ಭದಲ್ಲಿ ವೇಶ್ಯಾವಾಟಿಕೆಯಲ್ಲಿ ಪಾಲ್ಗೊಳ್ಳಲು ಬಂದ ಇಬ್ಬರೂ ಗಿರಾಕಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಕೆಲವಡೆ ವೇಶ್ಯಾವಾಟಿಕೆಯ ವದಂತಿ

ಶನಿವಾರ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿಗಳ ಬಂಧನವಾಗುತ್ತಿದ್ದಂತೆ ತಾಲೂಕಿನ ಇನ್ನೂ ಕೆಲವೆಡೆ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಸಾರ್ವಜನಿಕರಲ್ಲಿ ಚರ್ಚೆ ಕೇಳಿ ಬರುತ್ತಿದೆ. ಪಟ್ಟಣದ ವಸತಿಗೃಹ ಒಂದರಲ್ಲಿ ಸ್ಥಳೀಯರೇ ಹೆಚ್ಚಾಗಿ ರೂಮ್ ಬಾಡಿಗೆ ಪಡೆಯುತ್ತಿದ್ದು ಕೆಲವು ವರ್ಷಗಳಿಂದ ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲೆಯ ಕೇಂದ್ರ ಭಾಗದ ತಾಲೂಕಿಗೆ ಹೊಂದಿಕೊಂಡಿರುವ ಅಂಚಿನ ಗ್ರಾಮವೊಂದರ ಜನಪ್ರತಿನಿಧಿಯೊಬ್ಬರು ಈ ರೀತಿಯ ಕುಕೃತ್ಯಗಳಿಗೆ ಕಲ್ಲು ಬಂಡೆಯಂತೆ ಸಹಾಯ ಹಸ್ತ ನೀಡುತ್ತಿದ್ದಾರೆ ಎನ್ನುವದಂತಿಗಳು ಜೋರಾಗಿದೆ.