ದಾಂಡೇಲಿ : ಬಂಗೂರುನಗರದ ಡಿಲೆಕ್ಸ್ ಮೈದಾನದಲ್ಲಿ ವಿಜಯದಶಮಿಯ ದಿನದಂದು ನಡೆಯಲಿರುವ ರಾಮಲೀಲೋತ್ಸವ ಕಾರ್ಯಕ್ರಮಕ್ಕೆ ರಾವಣ, ಕುಂಭಕರ್ಣ, ಮೇಘನಾಥನ ಮೂರ್ತಿ ತಯಾರಿಕೆ ಕಾರ್ಯವು ಭರದಿಂದ ಸಾಗುತ್ತಿದೆ.
ಕಳೆದ 33 ವರ್ಷಗಳಿಂದ ರಾಮಲೀಲೋತ್ಸವ ಕಾರ್ಯಕ್ರಮಕ್ಕೆ ಮೂರ್ತಿ ತಯಾರಿಸಿ ಕೊಡುವ ಕಲಾವಿದ
ಹಳಿಯಾಳ ತಾಲೂಕಿನ ತೆರೆಗಾಂವ್ ಗ್ರಾಮದ ಉಮೇಶ್ ಮರಿಯಪ್ಪ ರಾವುತ್ ಅವರ ನೇತೃತ್ವದ ತಂಡ ಈಗಾಗಲೇ ರಾವಣ ಕುಂಭಕರ್ಣ ಮತ್ತು ಮೇಘನಾಥನ ಮೂರ್ತಿ ತಯಾರಿಕೆಯ ಕಾರ್ಯವನ್ನು ಭರದಿಂದ ನಡೆಸುತ್ತಿದೆ. ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಡಿಲೆಕ್ಸ್ ಮೈದಾನದಲ್ಲಿ ರಾಮಲೀಲೋತ್ಸವ ಕಾರ್ಯಕ್ರಮದ ಸಿದ್ಧತಾ ಕಾರ್ಯ ಚುರುಕುಗೊಂಡಿದೆ. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಅವರ ನೇತೃತ್ವದಲ್ಲಿ ಈ ಬಾರಿಯೂ ರಾಮಲೀಲೋತ್ಸವ ಕಾರ್ಯಕ್ರಮ ಸಂಭ್ರಮ, ಸಡಗರದಿಂದ ನಡೆಯಲಿದೆ.