ದಾಂಡೇಲಿಯ ಡಿಲಕ್ಸ್ ಮೈದಾನದಲ್ಲಿ ರಾಮಲೀಲೋತ್ಸವ‌ ಕಾರ್ಯಕ್ರಮಕ್ಕೆ ಭರದ ಸಿದ್ಧತೆ : ಸರಕಾರದ ನಿಯಮಾವಳಿಗೆ ಬದ್ಧ : ಕಾಗದ ಕಾರ್ಖಾನೆಯ ಪಿ.ಆರ್.ಓ ರಾಜೇಶ್ ತಿವಾರಿ

ದಾಂಡೇಲಿ : ನಗರದ ಬಂಗೂರುನಗರದ ಡಿಲಕ್ಸ್ ಮೈದಾನದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ವಿಜಯದಶಮಿಯಂದು ಆಯೋಜಿಸಲಾಗುವ ರಾಮಲೀಲೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿ ಸುಡುಮದ್ದುಗಳ ಪ್ರದರ್ಶನಕ್ಕೆ ಅನುಮತಿ ಇಲ್ಲದೆ ಇರುವುದರಿಂದ ದಾಂಡೇಲಿ ಜನತೆಗೆ ತೀವ್ರ ನೀರಾಶೆಯಾಗಿದೆ.

ಈಗಾಗಲೇ ಡಿಲಕ್ಸ್ ಮೈದಾನದಲ್ಲಿ ರಾವಣ, ಕುಂಭಕರ್ಣ, ಮೇಘನಾಥನ ಮೂರ್ತಿ ತಯಾರಿಕೆಯ ಕಾರ್ಯ ಭರದಿಂದ ನಡೆಯುತ್ತಿದೆ. ಸರಕಾರದ ನಿಯಮಾವಳಿಯಂತೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ಅವರು ಇಂದು ಗುರುವಾರ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಮೋಹನ್ ಹಲವಾಯಿ ಅವರು ರಾಮಲೀಲೋತ್ಸವ ಕಾರ್ಯಕ್ರಮದಲ್ಲಿ ಪ್ರಮುಖ ಆಕರ್ಷಣೆಯೇ ಸುಡುಮದ್ದುಗಳ ಪ್ರದರ್ಶನ. ಸುಡು ಮದ್ದುಗಳ ಈ ಪ್ರದರ್ಶನವನ್ನು ನೋಡಲೆಂದೇ, ಅತ್ಯಧಿಕ ಪ್ರಮಾಣದಲ್ಲಿ ಜನ ಆಗಮಿಸುತ್ತಾರೆ. ಈ ಬಾರಿ ಸುಡು ಮದ್ದುಗಳ ಪ್ರದರ್ಶನಕ್ಕೆ ಅನುಮತಿ ನೀಡದೇ ಇರುವುದು ನಗರದ ಜನತೆಗೆ ಬೇಸರ ತಂದಿದೆ. ಈ ಹಿನ್ನಲೆಯಲ್ಲಿ ಶಾಸಕರಾದ ಆರ್ ವಿ ದೇಶಪಾಂಡೆಯವರ ಗಮನಕ್ಕೆ ಈ ವಿಚಾರವನ್ನು ತರಲಾಗಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಸುಡುಮದ್ದುಗಳ ಪ್ರದರ್ಶನಕ್ಕೆ ಅನುಮತಿಯನ್ನು ಕೊಡಿಸಬೇಕೆಂದು ಪ್ರಾರ್ಥಿಸಲಾಗಿದೆ ಎಂದು ತಿಳಿಸಿರುವ ಅವರು ಆರ್.ವಿ.ದೇಶಪಾಂಡೆ ಅವರು ಮನವಿಗೆ ಸಕಾಲಿಕವಾಗಿ ಸ್ಪಂದಿಸಿದ್ದಾರೆ ಎಂದರು.