ದಾಂಡೇಲಿ : ದಕ್ಷಿಣ ಕರ್ನಾಟಕದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ದಾಂಡೇಲಿ ನಗರದ ಬಂಗೂರುನಗರದ ಡಿಲೆಕ್ಸ್ ಮೈದಾನದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಡಿ ನಡೆಯಲಿರುವ ರಾಮಲೀಲೊತ್ಸವ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಅನುಮತಿಯನ್ನು ನೀಡಿದ್ದಾರೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾತನಾಡಿಸಿದಾಗ ಅವರು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನಕ್ಕೆ ನಿಯಮಾವಳಿಯ ಪ್ರಕಾರ ಅವಕಾಶವನ್ನು ನೀಡಲಾಗಿದೆ. ಈ ಬಗ್ಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ತಹಶೀಲ್ದಾರರಿಗೆ ಸೂಚನೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ರಾಮಲೀಲೋತ್ಸವ ಕಾರ್ಯಕ್ರಮವನ್ನು ನೋಡಲು 40 ರಿಂದ 50 ಸಾವಿರ ಜನ ಆಗಮಿಸುತ್ತಿದ್ದು ಸುಡುಮದ್ದುಗಳ ಪ್ರದರ್ಶನವೇ ಈ ಕಾರ್ಯಕ್ರಮದ ವಿಶೇಷ. ಈ ಬಾರಿ ಸುಡು ಮದ್ದುಗಳ ಪ್ರದರ್ಶನಕ್ಕೆ ಅವಕಾಶ ಇಲ್ಲ ಎನ್ನುವುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಜಿಲ್ಲಾಧಿಕಾರಿಯವರ ಜೊತೆ ಮಾತುಕತೆಯನ್ನು ನಡೆಸಿ, ಸರಕಾರದ ಗಮನಕ್ಕೆ ತಂದು ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನಕ್ಕೆ ಅವಕಾಶ ಒದಗಿಸಿ ಕೊಟ್ಟಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಈ ನಿಟ್ಟಿನಲ್ಲಿ ದಾಂಡೇಲಿ ಜನತೆಯ ಬೇಡಿಕೆಯ ಅನುಸಾರವಾಗಿ ಪರಿಸರ ಸ್ನೇಹಿ ಸುಡುಮದ್ದುಗಳ ಪ್ರದರ್ಶನದ ಕುರಿತಂತೆ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಜಿಲ್ಲಾಧಿಕಾರಿಯವರ ಗಮನ ಸೆಳೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇನ್ನೂ ಸುಡುಮದ್ದುಗಳ ಪ್ರದರ್ಶನಕ್ಕೆ ಅನುಮತಿಯನ್ನು ಕೊಡಿಸುವಂತೆ ಆರ್ ವಿ ದೇಶಪಾಂಡೆಯವರಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ, ನಗರಸಭೆಯ ಸದಸ್ಯರಾದ ಮೋಹನ್ ಹಲವಾಯಿ, ಕಾಂಗ್ರೆಸ್ ಮುಖಂಡರುಗಳಾದ ವಿಷ್ಣುಮೂರ್ತಿ ರಾವ್, ರಾಘವೇಂದ್ರ ಶೆಟ್ಟಿ, ಕರವೇ ಘಟಕ ಅವರು ಕೂಡ ಮನವಿಯನ್ನು ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.
ಒಟ್ಟಿನಲ್ಲಿ ದಾಂಡೇಲಿಗರ ಬಹು ಬೇಡಿಕೆಯ ರಾಮಲೀಲೋತ್ಸವ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಸುಡು ಮದ್ದುಗಳ ಪ್ರದರ್ಶನಕ್ಕೆ ಕೊನೆಗೂ ಅನುಮತಿ ಸಿಕ್ಕಿರುವುದು ದಾಂಡೇಲಿಗರಲ್ಲಿ ಸಂಭ್ರಮ ಮನೆ ಮಾಡಿದೆ.