ಶಿರಸಿ: ಕಳೆದ ವಾರ ಅತಿವೃಷ್ಟಿಯಿಂದಾಗಿ ಮರ ಬಿದ್ದು ಮನೆ ಸಂಪೂರ್ಣ ನಾಶವಾಗಿದ್ದ ತಾಲೂಕಿನ ಹಳ್ಳಿಕಾನಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗುರುವಾರ ಭೇಟಿ ನೀಡಿ, ಮನೆ ಮಾಲೀಕರಿಗೆ ಪರಿಹಾರ ಮೊತ್ತದ ಆದೇಶ ಪತ್ರ ವಿತರಿಸಿದರು.
ಹಳ್ಳಿಕಾನ ವಾಸು ನಾಯ್ಕ ಎಂಬುವರ ಮನೆಯ ಮೇಲೆ ಬೃಹತ್ ಮರ ಮುರಿದು ಬಿದ್ದು ಮನೆ ಸಂಪೂರ್ಣ ನಾಶವಾಗಿತ್ತು. ಅಲ್ಲದೇ ಘಟನೆಯಲ್ಲಿ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಆದರೆ ಆ ಸಂದರ್ಭದಲ್ಲಿ ಊರಿನಲ್ಲಿ ಇರದ ಕಾರಣ ಕಾಗೇರಿ ಇಂದು ಅವರ ಮನೆಗೆ ಭೇಟಿ ನೀಡಿ 95,100 ರೂ. ಮೊತ್ತದ ತುರ್ತು ಪರಿಹಾರ ವಿತರಿಸಿದರು.
ನಂತರ ಮಾತನಾಡಿದ ಅವರು, ಈಗ ಮೊದಲನೇ ಕಂತಿನ ಪರಿಹಾರವಾಗಿ 95 ಸಾವಿರ ರೂ. ನೀಡಲಾಗಿದೆ. ಒಟ್ಟೂ 5 ಲಕ್ಷ ರೂ ಪರಿಹಾರ ಬರಲಿದೆ. ಮನೆ ಕಟ್ಟುತ್ತಾ ಹೋದಾಗ ಹಂತ ಹಂತವಾಗಿ ಪರಿಹಾರ ಬಿಡುಗಡೆಯಾಗುತ್ತದೆ. ಸರ್ಕಾರ ಹಾನಿಗೀಡಾದ ಸಂತ್ರಸ್ತರಿಗೆ ತುರ್ತು ಸ್ಪಂದನೆ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕುಳವೆ ಗ್ರಾಪಂ ಅಧ್ಯಕ್ಷ ವಿನಯ ಭಟ್, ಆ ಭಾಗದ ವಾರ್ಡ್ ಸದಸ್ಯ ಸಂದೇಶ ಭಟ್ ಬೆಳಖಂಡ, ತಹಶೀಲ್ದಾರ ಶ್ರೀಧರ ಮುಂದಲಮನಿ, ಪ್ರಮುಖರಾದ ಪ್ರಸನ್ನ ಜೋಶಿ, ಶ್ರೀನಾಥ ಶೆಟ್ಟಿ, ರವಿತೇಜ ರೆಡ್ಡಿ, ಮಂಜುನಾಥ ಶೇಟ್, ವಿಶ್ವ ಅರಸಿಕೇರಿ, ಎನ್.ವಿ.ಹೆಗಡೆ, ಪಿಡಿಒ ಸರೋಜಾ ನಾಯಕ ಹಾಗೂ ಗ್ರಾಮಸ್ಥರು ಇದ್ದರು.