ಶಿರಸಿ: ಬ್ರಾಹ್ಮಣರೆಂದು ಹೇಳಿಕೊಳ್ಳಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ. ನಮ್ಮ ಆಚಾರ, ವಿಚಾರ ಬಿಡಬಾರದು. ನಮ್ಮ ಧರ್ಮ ಮತ್ತು ಸಂಸ್ಕಾರವನ್ನು ಉಳಿಸಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್. ಎಸ್. ಸಚ್ಚಿದಾನಂದಮೂರ್ತಿ ಹೇಳಿದರು.
ನಗರದ ಟಿಆರ್‌ಸಿ ಬ್ಯಾಂಕ್ ಸಭಾಭವನದಲ್ಲಿ ಬುಧವಾರ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಶಿರಸಿ ಹಾಗು ಕಾರವಾರ ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿಪ್ರ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪುರಸ್ಕಾರ ಹಾಗೂ ವಿಪ್ರ ಸಾಧಕರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರದ ಮೋದಿ ನೇತೃತ್ವದ ಸರಕಾರ ಘೋಷಿಸಿದ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ನೀಡುವ ಶೇ. 10 ರಷ್ಟು ಮಿಸಲಾತಿ ಸೌಲಭ್ಯ ಕರ್ನಾಟಕ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯಕ್ಕೂ ದೊರೆಯಬೇಕು. ಇದಕ್ಕಾಗಿ ಸಂಘಟನಾತ್ಮಕವಾಗಿ ಹೋರಾಟ ನಡೆಸಬೇಕಿದೆ. ಕರ್ನಾಟಕದಲ್ಲಿ ಆರ್ಥಿಕವಾಗಿ ಹಿಂದುಳಿದ 144 ಸಮುದಾಯಗಳಿವೆ. ಅದರಲ್ಲಿ 139 ಜಾತಿಗಳಿಗೆ ರಾಜ್ಯ ಸರಕಾರ ಮೀಸಲಾತಿ ಸೌಲಭ್ಯ ನೀಡಿದೆ. ಆದರೆ ಇನ್ನು ಐದು ಸಮುದಾಯಗಳಿಗೆ ನೀಡಬೇಕಿದ್ದು ಅದನ್ನು ಒದಗಿಸಬೇಕು ಎಂದರು.
2015 ರಲ್ಲಿ ನಡೆದ ಜಾತಿಗಣತಿಯ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದವರು ಬ್ರಾಹ್ಮಣ ಎಂದು ಬರೆಸದೇ ತಮ್ಮ ಉಪಜಾತಿಗಳನ್ನು ಬರೆಸಿದ್ದರಿಂದ ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆ ಕೇವಲ 17.40 ಲಕ್ಷ ಇದೆ ಎಂದು ನಮೂದಾಗಿದೆ. ಆದರೆ ವಾಸ್ತವವಾಗಿ ರಾಜ್ಯದಲ್ಲಿ 42 ಲಕ್ಷಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿದ್ದಾರೆ. ಇದಕ್ಕಾಗಿ ಇನ್ನೊಮ್ಮೆ ಜಾತಿ ಗಣತಿ ನಡೆಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಮಂದಿ ವಿಪ್ರ ಸಾಧಕರನ್ನು ಸನ್ಮಾನಿಸಲಾಯಿತು. ವಿಂಗ್ ಕಮಾಂಡರ್ ಮುರಾರಿ ಭಟ್ಟ, ಯಕ್ಷಗಾನ ಕಲಾವಿದ ಸುಬ್ರಾಯ ಎಂ.ಹೆಗಡೆ ಕಪ್ಪೆಕೆರೆ, ಕೃಷಿ ಸಾಧಕಿ ವೇದಾ ಹೆಗಡೆ ನೀರ್ನಳ್ಳಿ, ಮಂಜುಗುಣಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ, ಬಗ್ಗೋಣ ಪಂಚಾಂಗ ರಚನಕಾರರಾದ ವೆಂಕಟರಮಣ ವಿ.ಪಂಡಿತ, ಜಯಶ್ರೀ ಪಂಡಿತ ಗೋಕರ್ಣ, ಶಿಕ್ಷಣ ಕ್ಷೇತ್ರದ ಕೊಡುಗೆಗೆ ಕೆ.ಆರ್.ಹೆಗಡೆ ದೇವಿಸರ, ಆಯುರ್ವೇದ ವೈದ್ಯ ಡಾ.ರವಿಕಿರಣ ಪಟವರ್ಧನ, ಉದ್ಯಮಿ ಶಂಕರ ಎನ್.ದಿವೇಕರ್ ಮಂಜಗುಣಿ ಅವರನ್ನು ಗೌರವಿಸಲಾಯಿತು. ಹಾಗೆಯೇ ಶಿರಸಿ ಹಾಗೂ ಕಾರವಾರ ಸೈಕ್ಷಣಿಕ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆದ 47 ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪುರಸ್ಕಾರ ನೀಡಲಾಯಿತು.
ಬ್ರಾಹ್ಮಣರ ಬೃಹತ್ ಸಮಾವೇಶ
ರಾಜ್ಯದಲ್ಲಿ 42 ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರಿದ್ದಾರೆ. ರಾಜ್ಯದಲ್ಲಿ 21 ವಿಧಾನಸಭಾ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಇಷ್ಟು ಸಾಮರ್ಥ್ಯ ಇರುವ ಸಮುದಾಯಕ್ಕೆ ಸರಕಾರದ ಸವಲತ್ತನ್ನು ನೀಡಲು ನಿರ್ಲಕ್ಷ್ಯ ಮಾಡಬಾರದು ಎಂದು ಒತ್ತಾಯಿಸಲು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತದೆ. ಪ್ರಧಾನಿ ಮೋದಿಯ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಉದ್ದೇಶವಿದೆ ಎಂದು ಎಚ್. ಎಸ್. ಸಚ್ಚಿದಾನಂದಮೂರ್ತಿ ತಿಳಿಸಿದರು.