ಜೋಯಿಡಾ: ತಾಲೂಕಿನ ಜಗಲಬೇಟ ಮತ್ತು ಅವೇಡಾದಲ್ಲಿ ಭಾರೀ ಮಳೆಯ ಕಾರಣ ನಾಟಿ ಮಾಡಿದ ಭತ್ತದ ಗದ್ದೆಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಪರಿಣಾಮ ಹಾನಿ ಸಂಭವಿಸಿದೆ. ಕಳೆದ ಒಂದು ವಾರದಿಂದ ಮಳೆ ಅಬ್ಬರಿಸಿ ಸುರಿಯುತ್ತಿದ್ದು, ಮಳೆ ನೀರು ಭತ್ತದ ಗದ್ದೆಯಲ್ಲಿ ತುಂಬಿ ಹರಿದು ನಾಟಿ ಮಾಡಿದ ಭತ್ತದ ಸಸಿಗಳನ್ನು ನಾಶಮಾಡಿದೆ.
ಭತ್ತದ ಗದ್ದೆಯಲ್ಲಿ ಮಣ್ಣು, ಕಲ್ಲುಗಳು ಬಂದು ಕೂತಿದೆ. ರೈತ ಜಿ.ಎನ್ ಗಾಂವಕರರ ಎರಡು ಎಕರೆ ಭತ್ತದ ಗದ್ದೆ ಕೂಡಾ ಹಾನಿಗೊಳಗಾಗಿದ್ದು, ಸರಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಇದಲ್ಲದೆ ಇವರ ಗದ್ದೆ ಸುತ್ತಲಿನ ಇನ್ನೂ ೧೦ ಎಕರೆಗೂ ಹೆಚ್ಚು ಭತ್ತದ ಗದ್ದೆ ಹಾನಿಗೊಳಗಾಗಿದೆ.
ಕಳೆದ ವರ್ಷ ಕೂಡಾ ಇದೆ ರೀತಿ ತಾಲೂಕಿನ ಬಹುತೇಕ ಕಡೆಗಳಲ್ಲಿ ಭತ್ತದ ಕೃಷಿ ಮಳೆಯಿಂದಾಗಿ ಹಾನಿಗೊಳಗಾಗಿತ್ತು. ಪರಿಹಾರಕ್ಕಾಗಿ ರೈತರು ಅರ್ಜಿಸಲ್ಲಿಸಿದ್ದರೂ ಯಾವುದೇ ಪರಿಹಾರ ಸಿಕ್ಕಿಲ್ಲ ಎನ್ನುವುದು ಈ ಭಾಗದ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಭಾರೀ ಮಳೆಯ ಕಾರಣ ನೀರು ಬತ್ತದ ಗದ್ದೆಯಲ್ಲಿ ತುಂಬಿ ಹರಿದು ನಾಟಿ ಮಾಡಿದ ಭತ್ತದ ಬೇಳೆ ಹಾನಿಗೊಳಗಾಗಿದೆ. ಸರಕಾರ ಇದನ್ನು ಪರಿಸಿಲಿಸಿ ಪರಿಹಾರ ನೀಡುವಂತಾಗಬೇಕು. ಕಳೆದ ವರ್ಷದ ಪರಿಹಾರ ಕೂಡಾ ಇನ್ನೂ ಬಂದಿಲ್ಲ.
– ಜಿ.ಎನ್.ಗಾಂವಕರ, ಜಗಲಬೇಟ ಕೃಷಿಕ
ಮಳೆಯಿಂದಾಗಿ ಭತ್ತದ ಬೇಳೆ ಹಾನಿಗೊಳಗಾದವರು ಅರ್ಜಿ ಸಲ್ಲಿಸಿದಲ್ಲಿ ಕಂದಾಯ ಮತ್ತು ಕೃಷಿ ಇಲಾಖೆಯ ಜಂಟಿ ಸರ್ವೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು.
– ಪಿ. ಐ. ಮಾನೆ, ಸಹಾಯಕ ಕೃಷಿ ನಿರ್ದೆಶಕರು