ಅಂಕೋಲಾ: ನಾಡಿನೆಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ ಮನೆ ಮಾಡಿದೆ. ಮನೆ ಮನೆಯಲ್ಲೂ ಗಣಪನ ಮೂರ್ತಿ ತಂದು ಆರಾಧಿಸುತ್ತಿದ್ದಾರೆ. ಜೊತೆಗೆ ಸಾರ್ವಜನಿಕವಾಗಿಯೂ ವಿಭಿನ್ನ ಬಗೆಯ ವಿನಾಯಕನ ಮೂರ್ತಿಗಳನ್ನ ಜನರು ಪ್ರತಿಷ್ಠಾಪಿಸಿದ್ದಾರೆ. ಆದರಂತೆ ಇಲ್ಲೊಂದು ಕಡೆ ಪುನೀತ್ ಅಭಿಮಾನಿಗಳು ವಿಭಿನ್ನವಾಗಿ ಗಣೇಶನ ಮೂರ್ತಿಯನ್ನ ಪ್ರತಿಷ್ಠಾಪಿಸಿದ್ದು ವಿಶೇಷ ಆಕರ್ಷಣೀಯವಾಗಿದೆ. ಗಣಪನ ಪಕ್ಕದಲ್ಲಿ ಟೈ ಹಾಕಿ, ಸೂಟು ಧರಿಸಿ, ನಗುಮೊಗದಿಂದ ಕುಳಿತಿರುವ ಕನ್ನಡ ಕೋಟ್ಯಧಿಪತಿ ನಡೆಸಿಕೊಡುವ ರೀತಿ ಪುನೀತ್ ಮೂರ್ತಿ ಇಟ್ಟಿರುವುದು ಜನಾಕರ್ಷಣೀಯವಾಗಿದೆ.
ತಾಲೂಕಿನ ಅವರ್ಸಾ ಗ್ರಾಮದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪುನೀತ್ ರಾಜಕುಮಾರ ಮೂರ್ತಿಯನ್ನು ಗಣೇಶನೊಂದಿಗೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಡುವ ಮಾದರಿಯಲ್ಲಿ ಸ್ಥಾಪನೆ ಮಾಡಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಎಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಗಣೇಶ ಹಬ್ಬದ ಸಂದರ್ಭದಲ್ಲಿ ಅಗಲಿದ ಸ್ಯಾಂಡಲ್‌ವುಡ್ ನಟ, ಪವರ್‌ಸ್ಟಾರ್ ಪುನೀತ ರಾಜಕುಮಾರ್ ಅವರನ್ನ ಸ್ಮರಿಸಲು ಅಪ್ಪು ಅಭಿಮಾನಿಗಳು ವಿನೂತನ ಪ್ರಯತ್ನ ಮಾಡಿದ್ದಾರೆ.
ಅವರ್ಸಾ ಗ್ರಾಮದ ಸಾರ್ವಜನಿಕ ಗಣೇಶೋತ್ಸವ ಸಮಿತಿ 39 ನೇ ಗಣೇಶೋತ್ಸವವನ್ನ ಆಚರಿಸುತ್ತಿದ್ದು, ಈ ಬಾರಿ ಅಕಾಲಿಕವಾಗಿ ಅಗಲಿದ ಸ್ಯಾಂಡಲ್‌ವುಡ್ ನಟ ಪುನೀತ್ ರಾಜಕುಮಾರರನ್ನ ನೆನೆಯಲು ಈ ಪ್ರಯತ್ನ ಮಾಡಿದೆ.
ಕನ್ನಡದ ಕೋಟ್ಯಧಿಪತಿ ಪುನೀತ್ ರಾಜಕುಮಾರ್ ಹಾಗೂ ಗಣಪನ ಮೂರ್ತಿಯನ್ನ ಅವರ್ಸಾ ಗ್ರಾಮದ ಹಿರಿಯ ಕಲಾವಿದ ಕುಮ್ಮಣ್ಣ ಮೇತ್ರಿ ಮನೆತನದ ದಿನೇಶ ಮೇತ್ರಿ ತಯಾರು ಮಾಡಿದ್ದಾರೆ. ಮೇತ್ರಿ ಕುಟುಂಬ ಮೂರ್ತಿ ತಯಾರಿಕೆಯಲ್ಲಿ ಹಿಂದಿನಿಂದಲೂ ಪ್ರಖ್ಯಾತಿಯನ್ನ ಗಳಿಸಿದ್ದಾರೆ. ವರ್ಷವಿಡೀ ಈ ಕುಟುಂಬದಲ್ಲಿ ಮೂರ್ತಿಗಳ ನಿರ್ಮಾಣ ಕಾರ್ಯ ನಡೆಯುತ್ತಲೇ ಇರುತ್ತದೆ. ಇಂಥ ಕುಟುಂಬದ ದಿನೇಶ ಮೇತ್ರಿ ಇದೀಗ ಪುನೀತ್ ಹಾಗೂ ಗಣಪನನ್ನ ಕನ್ನಡದ ಕೋಟ್ಯಾಧಿಪತಿಯ ಸೆಟ್‌ನಲ್ಲಿ ಕೂತಂತೆ ತಯಾರು ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಎರಡೂ ಮೂರ್ತಿಗಳು 9 ಫೂಟ್ ಎತ್ತರ ಇವೆ. ಒಂದು ತಿಂಗಳ ಕಾಲ ದಿನೇಶ ಹಾಗೂ ಅವರ ಕುಟುಂಬದ ಕಲಾವಿದರು ಸೇರಿ ಪುನೀತ್ ಹಾಗೂ ಗಣಪನ ಮೂರ್ತಿಯನ್ನ ತಯಾರಿಸಿದ್ದಾರೆ. ಪುನೀತ್ ಅವರ ಮೂರ್ತಿ ಥೇಟ್ ಅವರನ್ನೇ ಹೋಲುವಂತಿದ್ದು ಸೂಟು, ಕೈಗೆ ವಾಚು, ಕಣ್ಣಿಗೆ ಕಪ್ಪು ಕನ್ನಡಕದ ಜೊತೆಗೆ ಕುಳಿತಿರುವ ಮೂರ್ತಿ ಎಂತಹವರನ್ನೂ ಬೆರಗುಗೊಳಿಸುವಂತಿದೆ.
ಒಟ್ಟಾರೇ ಗಣೇಶ ಚತುರ್ಥಿ ಸಂಭ್ರಮದ ನಡುವೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಯತ್ನದಿಂದ ನೆಚ್ಚಿನ ನಟನನ್ನ ಕಳೆದುಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ಅಪ್ಪುವನ್ನು ಕಣ್ತುಂಬಿಕೊಳ್ಳಲು ಅವಕಾಶ ಸಿಕ್ಕಿದೆ. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಜನರು ಪುನೀತ್ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಿದ್ದು, ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಅಪ್ಪುವನ್ನು ಕಳೆದುಕೊಂಡ ಅಭಿಮಾನಿ ಬಳಗ ನಗುಮೊಗದ ಪುನೀತ್ ಮೂರ್ತಿಯನ್ನ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ನಟನೆಯ ಜೊತೆಗೆ ಸಾಕಷ್ಟು ಉತ್ತಮ ಕಾರ್ಯಗಳ ಮೂಲಕ ಪುನೀತ್ ರಾಜಕುಮಾರ ಎಲ್ಲರ ಮನಗೆದ್ದ ಅಪ್ಪುವಾಗಿದ್ದು, ಅವರ ಆದರ್ಶಗಳು ನಮ್ಮೆಲ್ಲರಿಗೂ ಮಾದರಿ.
– ವಿನಾಯಕ ನಾಯ್ಕ್ , ಸ್ಥಳೀಯರು