ಕುಮಟಾ : ಆಜಾದಿಕಾ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಕೊಂಕಣ ಎಜುಕೇಶನ್ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯವರು “ಡೈಮಂಡ್ ರನ್” ಹೆಸರಿನಲ್ಲಿ ಧ್ವಜಧಾರಿ ವಿದ್ಯಾರ್ಥಿಗಳಿಂದ ಪಟ್ಟಣದಾದ್ಯಂತ ಓಟ ನಡೆಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ರಂಗು ತಂದರು.
ಪಟ್ಟಣದ ತಹಶೀಲ್ದಾರ್ ಕಚೇರಿಯ ಎದುರಿನಲ್ಲಿ ಶಾಸಕ ದಿನಕರ ಶೆಟ್ಟಿ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹಾನ್ ನಾಯಕರನ್ನು ಸ್ಮರಿಸಿಕೊಳ್ಳುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಎಲ್ಲೆಡೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಯೋಜಿಸಲು ಕರೆ ನೀಡಿದ್ದಾರೆ. ಇದರ ಪ್ರಯುಕ್ತ ಕೊಂಕಣ ಎಜುಕೇಶನ್ ಟ್ರಸ್ಟ್ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳು ದೇಶದ ಕುರಿತಾಗಿ ಜಾಗೃತರಾಗಬೇಕು. ಸುಭದ್ರ ಭಾರತ ನಿರ್ಮಾಣಕ್ಕೆ ಯುವಜನತೆ ಮುಂದಾಗಬೇಕು ಎಂದು ಕರೆ ನೀಡಿದರು.
ತಹಸೀಲ್ದಾರ್ ಕಚೇರಿಯ ಎದುರಿನಿಂದ ಪ್ರಾರಂಭಗೊಂಡ ಡೈಮಂಡ್ ರನ್ ಗಿಬ್ ವೃತ್ತದ ಮೂಲಕ ಬಸ್ತಿಪೇಟೆ ಮಾರ್ಗವಾಗಿ ಕುಮಟಾ ಪಟ್ಟಣ ಪ್ರವೇಶಿಸಿತು. ಶ್ರೀ ಶಾಂತೇರಿ ಕಾಮಾಕ್ಷಿ ದೇವಾಲಯದ ವತಿಯಿಂದ ಸ್ವಾಗತ ಮಾಡಿ, ವಿದ್ಯಾರ್ಥಿಗಳಿಗೆ ಅಲ್ಪ ಉಪಹಾರ ನೀಡಿತು. ನಂತರ ಪಟ್ಟಣದ ವಿವಿಧ ದಾರಿಗಳ ಮೂಲಕ ಸಂಚರಿಸಿದ ವಿದ್ಯಾರ್ಥಿಗಳು ಜಯಘೋಷಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು. ಪಟ್ಟಣದ ಮಣಕಿ ಮೈದಾನದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಮುರಳೀಧರ ಪ್ರಭು, ಜಂಟಿ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ಅನಂತ ಶಾನಭಾಗ, ರಾಮಕೃಷ್ಣ ಗೋಳಿ, ಸಲಹೆಗಾರರಾದ ಬಿ.ಎಸ್ ಗೌಡ, ಆರ್.ಹೆಚ್ ದೇಶಭಂಡಾರಿ, ವಿಧಾತ್ರಿ ಅಕಾಡೆಮಿಯ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ಮುಖ್ಯಾಧ್ಯಾಪಕಿ ಸುಮಾ ಪ್ರಭು ಹಾಜರಿದ್ದರು.