ಗಮನಸೆಳೆದ ಚಿಕ್ಕಮಕ್ಕಳ ಛದ್ಮವೇಷ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆ.!

ಕುಮಟಾ: ಪಟ್ಟಣದ ಬಗ್ಗೋಣದಲ್ಲಿರುವ ಲಾಯನ್ಸ್ ಸಭಾಭವನದಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆ ಲಾಯನ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಚಿಕ್ಕಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯು ಪ್ರೇಕ್ಷಕರ ಗಮನಸೆಳೆಯಿತು.

ಲಾಯನ್ಸ್ ಸದಸ್ಯ ಹಾಗೂ ನಿವೃತ್ತ ಪ್ರಾಂಶುಪಾಲ ಎಸ್.ಎಸ್.ಹೆಗಡೆ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ದೇಶಾದ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದ್ದು, ಲಾಯನ್ಸ್ ಕ್ಲಬ್ ಇತಿಹಾಸದಲ್ಲಿ ಮೊದಲ ಬಾರಿಗೆ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. ಚಿಕ್ಕಮಕ್ಕಳಿಗೆ ಛದ್ಮವೇಷ ಮತ್ತು ದೇಶಭಕ್ತಿಗೀತೆ ಸ್ಪರ್ಧೆ ಆಯೋಜಿಸಿ, ದೇಶದ ಪ್ರಜೆಗಳಲ್ಲಿ ದೇಶಭಕ್ತಿ ಜಾಗೃತಿಗೊಳಿಸಲಾಗುತ್ತಿದೆ. ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ದೇಶಭಕ್ತಿ ಜಾಗೃತಿಗೊಳಿಸಿ ಭವ್ಯ ಭಾರತವನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕಿದೆ. ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ವೇಷ ಧರಿಸಿ, ಮಕ್ಕಳು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು.

ಪುಟಾಣಿ ಮಕ್ಕಳು ಮಹಾತ್ಮಾ ಗಾಂಧಿ, ಸುಭಾಷಚಂದ್ರ ಬೋಸ್, ಜವಾಲಾಲ್ ನೆಹರು, ಯೋಧರ, ಭಾರತಾಂಭೆ, ರಾಣಿ ಅಬ್ಬಕ್ಕ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಒಬವ್ವ ವೇಷಭೂಷಣಗಳಲ್ಲಿ ಮಿಂಚಿದರು. ವಿದ್ಯಾರ್ಥಿನಿಯರು ದೇಶಭಕ್ತಿಗೀತೆ ಹಾಡಿ ದೇಶಪ್ರೇಮ ಮೆರೆದರು. ಲಾಯನ್ಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಶೇಟ್ ಕೈಚಳಕದಿಂದ ಮೂಡಿಬಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿಗಳ ರಂಗೋಲಿಯು ಗಮನಸೆಳೆಯಿತು.

ಸ್ಪರ್ಧೆಗಳಲ್ಲಿ ಒಟ್ಟೂ 35 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 1 ರಿಂದ 4 ನೇ ತರಗತಿಯ ವಿದ್ಯಾರ್ಥಿಗಳ ಛದ್ಮವೇಷ ಸ್ಪರ್ಧೆಯಲ್ಲಿ ಶೀತಲ ಸಂತೋಷ ಶೇಟ್ (ಪ್ರಥಮ), ಪ್ರಥಮ ಕುಮಾರ ಶೇಟ್ (ದ್ವಿತೀಯ), ಆರೀಶ್ ಸೈಯದ್ (ತೃತೀಯ) ಸ್ಥಾನ ಪಡೆದುಕೊಂಡಿದ್ದಾರೆ. 5 ರಿಂದ 7 ನೇ ತರಗತಿವರೆಗಿನ ಛದ್ಮವೇಷ ಸ್ಪರ್ಧೆಯಲ್ಲಿ ಪ್ರತೀಕ್ಷಾ (ಪ್ರಥಮ), ನಾಗಶ್ರೀ(ದ್ವೀತಿಯ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಭಕ್ತಿಗೀತೆ ಸ್ಪರ್ಧೆಯಲ್ಲಿ ಮಾನಸಾ ಹೆಗಡೆ (ಪ್ರಥಮ), ಚೈತನ್ಯ ಭಟ್ಟ (ದ್ವೀತಿಯ) ಹಾಗೂ ಅಂಕಿತಾ ಗೌಡ(ತೃತೀಯ) ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಈ ಕರ್ಯಕ್ರಮದಲ್ಲಿ ಲಾಯನ್ಸ್ ಸದಸ್ಯರಾದ ಜಯಲಕ್ಷ್ಮೀ ಭಟ್ಟ್, ದಾಮೋದರ ಭಟ್ಟ್, ಎಚ್.ಎನ್.ನಾಯ್ಕ, ಡಾ.ಸುರೇಶ ಹೆಗಡೆ, ನೀರಜಾ ನಾಯ್ಕ, ವಿನಯಾ ಹೆಗಡೆ, ಡಾ.ಸಿ.ಎಸ್.ವೆರ್ಣೇಕರ, ರವಿ ಶೇಟ್, ಖಜಾಂಚಿ ಸ್ವಪ್ನಾ ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.