ಉದಾಸೀನವೇ ಕೋಪಕ್ಕೆ ಸೂಕ್ತ ಉತ್ತರ – ರಾಘವೇಶ್ವರ ಶ್ರೀ

ಗೋಕರ್ಣ: ಕೋಪಕ್ಕೆ ತಾಳ್ಮೆಯೇ ಮದ್ದು. ನಮ್ಮ ಮೇಲೆ ಬೇರೆಯವರು ಸಿಟ್ಟು ಮಾಡಿಕೊಂಡಾಗ ಅದಕ್ಕೆ ಕೋಪ ಪ್ರತ್ಯುತ್ತರವಲ್ಲ; ಸಮಾಧಾನ ಅಥವಾ ಉದಾಸೀನವೇ ಕೋಪಕ್ಕೆ ಸೂಕ್ತ ಉತ್ತರ. ಕೋಪಕ್ಕೆ ತಾಳ್ಮೆ ದಂಡನೆಯೂ ಆಗಬಲ್ಲದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಶನಿವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ‌ಕೋಪಕ್ಕೆ ಪ್ರತೀಕಾರ ಉತ್ತರವಲ್ಲ; ಅಂಥ ಪ್ರತೀಕಾರದ ಪರಿಣಾಮ ಘೋರವಾಗುತ್ತದೆ. ಪ್ರತೀಕಾರದಿಂದ ಎರಡೂ ಕಡೆ ಹಾನಿಯಾಗುತ್ತದೆ. ಕೋಪಕ್ಕೆ ಕೋಪ, ತಾಪಕ್ಕೆ ತಾಪ ಉತ್ತರವಲ್ಲ ಎಂದು ನಿದರ್ಶನ ಸಹಿತ ವಿವರಿಸಿದರು. ವಿಶ್ವದಲ್ಲಿ ತಾಳ್ಮೆಯಿಂದ ಸಾಧನೆ ಮಾಡಿದವರು ಇದ್ದಾರೆಯೇ ವಿನಃ ಕೋಪದಿಂದ ಸಾಧನೆ ಮಾಡಿದ ನಿದರ್ಶನ ಇಲ್ಲ. ತಾಳ್ಮೆಗೆ ಬಲುದೊಡ್ಡ ಶಕ್ತಿ ಇದೆ. ತಾಳ್ಮೆ ಹಾಗೂ ಸದ್ಗುಣಗಳ ಸಂಪತ್ತು ಎಲ್ಲರಿಗೂ ದೊರಕಲಿ ಎಂದು ಆಶಿಸಿದರು.

ವಸಿಷ್ಠ, ವಿಶ್ವಾಮಿತ್ರರ ಯುದ್ಧದಲ್ಲಿ ವಿಶ್ವಾಮಿತ್ರರ ದಾಳಿಗೆ ಪ್ರತೀಕಾರ ಕೈಗೊಳ್ಳುವ ಬದಲು ವಸಿಷ್ಠರು ಹೂಂ ಕಾರ ಮಾಡುತ್ತಾರೆ. ಇದೇ ವಿಶ್ವಾಮಿತ್ರರ ಸೈನ್ಯ ನಾಶಕ್ಕೆ ಕಾರಣವಾಗುತ್ತದೆ. ತಮ್ಮ ಮೇಲೆ ಶಸ್ತ್ರ ಪ್ರಯೋಗ ನಡೆದಾಗಲೂ ವಸಿಷ್ಠರು ಬ್ರಹ್ಮದಂಡವನ್ನು ಹಿಡಿದು ತಾಳ್ಮೆಯಿಂದ ನಿಂತು ಎದುರಿಸಿದರು. ಸಮಾಧಾನದ ಮುಂದೆ ಎಲ್ಲ ಅಸ್ತ್ರಗಳೂ ಸೋಲುತ್ತವೆ ಎಂದು ಮಾರ್ಮಿಕವಾಗಿ ನುಡಿದರು.

ಅಸಹನೆಯ ಯುವಕನೊಬ್ಬ ಬುದ್ಧನನ್ನು ಒಮ್ಮೆ ವಾಚಾಮಗೋಚರವಾಗಿ ಬಯ್ಯುತ್ತಾನೆ. ಬೋಧನೆ ಮಾಡುವ ಅಧಿಕಾರ ನಿನಗೆ ನೀಡಿದವರು ಯಾರು ಎಂದು ವಿನಾಕಾರಣ ಆತನನ್ನು ಹೀಗಳೆಯುತ್ತಾನೆ. ಆಗ ಬುದ್ಧ ಒಂದು ಪ್ರಶ್ನೆ ಮುಂದಿಡುತ್ತಾನೆ. ನೀನು ಉಡುಗೊರೆ ಖರೀದಿ ಮಾಡಿದಾಗ ಅದನ್ನು ಕೊಡಬೇಕೆಂದುಕೊಂಡ ವ್ಯಕ್ತಿ ಅದನ್ನು ನಿರಾಕರಿಸಿದಾಗ ಅದು ಯಾರಿಗೆ ಸಲ್ಲುತ್ತದೆ ಎಂದು ಬುದ್ಧ ಪ್ರಶ್ನಿಸುತ್ತಾನೆ. ಆಗ ನನ್ನಲ್ಲೇ ಉಳಿಯುತ್ತದೆ ಎಂದು ಯುವಕ ಹೇಳುತ್ತಾನೆ. ನೀನು ಇಷ್ಟರವರೆಗೆ ನೀಡಿದ ಉಡುಗೊರೆಯನ್ನು ನಾನು ಸ್ವೀಕರಿಸುವುದಿಲ್ಲ; ನಿನ್ನಲ್ಲೇ ಉಳಿಯಲಿ ಎಂದು ಬುದ್ಧ ಹೇಳಿದಾಗ ಯುವಕನಿಗೆ ತನ್ನ ತಪ್ಪಿನ ಅರಿವಾಗುತ್ತದೆ ಎಂದು ಬಣ್ಣಿಸಿದರು.
ಬೇರೆಯವರು ನಮ್ಮ ಮೇಲೆ ಸಿಟ್ಟುಗೊಂಡಾಗ ನಾವು ಸಮಾಧಾನದಿಂದಲೇ ಅದನ್ನು ಎದುರಿಸಬೇಕು ಆಗ ಜಯ ನಮ್ಮದಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ಧಾರ್ಮಿಕ ಕಾರ್ಯಕ್ರಮದಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ನವಚಂಡಿ ಹವನ, ಗಣಪತಿ ಹವನ ನಡೆಯಿತು.