ಕುಮಟಾ: ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಿದರೆ ಉಳಿದ ವಿದ್ಯಾರ್ಥಿಗಳಿಗೆ ಸಾಧಿಸಬೇಕೆಂಬ ಛಲ ಬರುತ್ತದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ತಾಲೂಕಿನ ಹೆಗ್ಗಾರಗದ್ದೆಯಲ್ಲಿ ತಾಲೂಕು ಹಾಗೂ ಜಿಲ್ಲಾ ಕುಂಬ್ರಿಮರಾಠಿ ಅಭಿವೃದ್ಧಿ ಸಂಘದಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿ.ಯು.ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕುಂಬ್ರಿಮರಾಠಿ ಸಮಾಜದವರು ಅರಣ್ಯ ಮಧ್ಯದಲ್ಲಿ ವಾಸಿಸುವ ಜನಾಂಗದವರು. ಪ್ರಾಮಾಣಿಕತೆಗೆ ಹೆಸರಾದ ಈ ಸಮಾಜವು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಪಾಲಕರು ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ಪ್ರೇರಣೆ ನೀಡಬೇಕು ಎಂದು ಕರೆ ನೀಡಿದರು.
ಕುಂಬ್ರಿಮರಾಠಿ ಸಮಾಜದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಶಾಸಕರು ಸನ್ಮಾನಿಸಿದರು.
ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಗಜಾನನ ಪೈ ಮಾತನಾಡಿ, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿ, ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇಂದಿನ ವಿದ್ಯಾರ್ಥಿಗಳು ಟಿ.ವಿ ಮತ್ತು ಮೊಬೈಲ್ ಅತಿಯಾದ ಬಳಕೆಯಿಂದ ಓದುವ ಹವ್ಯಾಸದಿಂದ ವಿಮುಖರಾಗುತ್ತಿರುವುದು ವಿಷಾದನೀಯ ಎಂದರು.
ಕುಂಬ್ರಿಮರಾಠಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮರಾಠಿ, ತಾಲೂಕಾಧ್ಯಕ್ಷ ಪುರುಷೋತ್ತಮ ಮರಾಠಿ, ವೆಂಕಟರಮಣ ಮರಾಠಿ, ರಾಮ ಮರಾಠಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ ಶಾಸಕ ದಿನಕರ ಶೆಟ್ಟಿ ಪೂಜೆ ಸಲ್ಲಿಸಿದರು.