ರಸ್ತೆಯ ಮೇಲೆ ಮಲಗಿದ್ದ ಹೆಬ್ಬಾವು ಕಂಡು ಹೌಹಾರಿದ ಜನ.!

ಕುಮಟಾ: ಕಾಡಿನಿಂದ ನಾಡಿಗೆ ಬಂದ ಹೆಬ್ಬಾವನ್ನು ಉರಗ ಪ್ರೇಮಿ ರವೀಂದ್ರ ಭಟ್ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಪಟ್ಟಣದ ವಿವೇಕನಗರದ ರಸ್ತೆ ಮೇಲೆ ಮಲಗಿದ್ದ ಹೆಬ್ಬಾವನ್ನು ಕಂಡ ಡಿ.ಜಿ.ಹೆಗಡೆ ತಕ್ಷಣ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿದ್ದಾರೆ.

ಸುದ್ದಿ ತಿಳಿದು ಜನ ಸ್ಥಳಕ್ಕೆ ಆಗಮಿಸಿದ್ದರಿಂದ ಭಯಗೊಂಡ ಹೆಬ್ಬಾವು ಜೀಡಿನಲ್ಲಿ ಅವಿತುಕೊಂಡಿತ್ತು. ಸ್ಥಳಕ್ಕಾಗಮಿಸಿದ ಉರಗ ರಕ್ಷಕ ರವೀಂದ್ರ ಭಟ್ ಹಾವನ್ನು ಪತ್ತೆಹಚ್ಚಿ ಸುಮಾರು 2 ಘಂಟೆಗಳ ಕಾರ್ಯಾಚರಣೆ ನಡೆಸಿದರು. ಬಳಿಕ ಸುರಕ್ಷಿತವಾಗಿ ಹಾವನ್ನು ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ನಂತರ ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ಸೆರಸಿಕ್ಕ ಹೆಬ್ಬಾವು 6 ರಿಂದ 8 ತಿಂಗಳ ಮರಿಯಾಗಿದ್ದು, ಸುಮಾರು 10 ಅಡಿ ಉದ್ದವಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ತಿಳಿಸಿದರು. ಹೆಬ್ಬಾವನ್ನು ಹಿಡಿಯಲು ಮಂಜುನಾಥ ಹೆಗಡೆ, ಆದಿತ್ಯ ಹೆಗಡೆ ಸಹಕರಿಸಿದರು.