ಕಾರವಾರ: ಬಿಜೆಪಿ ಯುವ ಮುಖಂಡ ಪ್ರವೀಣ್ ದುಷ್ಕರ್ಮಿಗಳಿಂದ ಹತ್ಯೆಯಾದ ಘಟನೆ ಬೆನ್ನಲ್ಲೇ ರಾಜ್ಯದಾದ್ಯಂತ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ರಾಜಿನಾಮೆ ನೀಡುವ ನಿಧಾರವನ್ನ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಅನೇಕ ಜಿಲ್ಲೆಗಳಲ್ಲಿ ಯುವ ಮೋರ್ಚಾ ಪದಾಧಿಕಾರಿಗಳು ಸಾಮೂಹಿಕ ರಾಜಿನಾಮೆ ನೀಡಿ ಸ್ವಪಕ್ಷಕ್ಕೇ ಬಿಸಿ ಮುಟ್ಟಿಸುವ ಕಾರ್ಯ ಮಾಡಿದ್ದರು. ಇದೀಗ ಕಾರ್ಯಕರ್ತರು ಹಿರಿಯ ಮುಖಂಡರ ಮಾತಿಗೆ ಮನ್ನಣೆ ನೀಡಿ ರಾಜಿನಾಮೆ ವಾಪಸ್ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯುವಮೋರ್ಚಾ ನಗರ ಘಟಕದ ಅಧ್ಯಕ್ಷ ಶುಭಂ ಕಳಸ್ ಪಕ್ಷದ ಮುಖಂಡರಲ್ಲಿ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ನಾವು ಪ್ರವೀಣ್ ಹತ್ಯೆ ಬಳಿಕ ಭಾವೋದ್ವೇಗಕ್ಕೆ ಒಳಗಾಗಿ ಈ ರೀತಿ ಮಾತನಾಡಿದ್ದೆವು. ಇದೀಗ ನಮ್ಮ ತಪ್ಪಿನ ಅರಿವಾಗಿದೆ. ಅಲ್ಲದೇ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮ ಕೈಗೊಂಡು ಕೆಲವರನ್ನು ಬಂಧಿಸಲಾಗಿದೆ. ಹಾಗೂ ಪ್ರವೀಣ್ ಕುಟುಂಬಕ್ಕೆ ನೆರವು ನೀಡಿದ್ದು ಸಮಾಧಾನ ತಂದಿದೆ. ಹೀಗಾಗಿ ನಮ್ಮ ರಾಜಿನಾಮೆ ನಿರ್ಧಾರವನ್ನು ವಾಪಸ್ ಪಡೆಯುತ್ತಿದ್ದೇವೆ ಎಂದರು. ಇನ್ನು ಸಿಎಂ ನಮ್ಮ ಜಿಲ್ಲೆಗೆ ಬರುವ ವೇಳೆ ಅದ್ಧೂರಿಯಾಗಿಯೇ ಬರಮಾಡಿಕೊಳ್ಳುತ್ತೇವೆ ಎಂದು ಶುಭಂ ಕಳಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮ ಮಾತಿನಿಂದ ಬಿಜೆಪಿ ಹಿರಿಯ ನಾಯಕರ ಮನಸ್ಸಿಗೆ ಘಾಸಿಯಾಗಿದೆ. ಅಲ್ಲದೇ ಈ ಬಗ್ಗೆ ಜಿಲ್ಲೆಯ ಬಿಜೆಪಿ ಮುಖಂಡರು ತಿಳಿಹೇಳಿದ್ದು ನಗರ ಹಾಗೂ ಗ್ರಾಮೀಣ ಯುವ ಮೋರ್ಚಾ ಮುಖಂಡರು ಬಹಿರಂಗವಾಗಿ ಕ್ಷಮೆಯಾಚಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರವಾರದ ಗ್ರಾಮೀಣ ಹಾಗೂ ನಗರ ಘಟಕ ಸೇರಿ ಒಟ್ಟು 42 ಪದಾಧಿಕಾರಿಗಳು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ರಾಜಿನಾಮೆ ನೀಡಿದ್ದರು. ಕೊಲೆ ಮಾಡಿದವರನ್ನ ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಮತ್ತು ಮೃತ ಪ್ರವೀಣ್ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದರು. ಹಾಗೂ ಹಲವರಿಗೆ ಈ ರೀತಿಯ ಬೆದರಿಕೆಗಳಿದ್ದು ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಒದಗಿಸಿ ಎಂದು ಒತ್ತಾಯಿಸಿದ್ದರು.
ಮಾಧ್ಯಮಗೋಷ್ಟಿಯಲ್ಲಿ ಯುವ ಮೋರ್ಚಾ ಗ್ರಾಮೀಣ ಘಟಕದ ಅಧ್ಯಕ್ಷ ಪ್ರಣಯ್ ರಾಣೆ, ಪದಾಧಿಕಾರಿಗಳಾದ ನಾಗರಾಜ ದುರ್ಗೇಕರ್, ಅಜಯ್ ಜೋಶಿ, ಸುದೇಶ್ ತಳೇಕರ್, ನವೀನ್ ಮಿರಾಶಿ, ರಿತಿಕ್ ಸಳೇಕರ್, ಸುಭಾಷ್ ಗುನಗಿ, ಮಂಜುನಾಥ್ ಗೌಡ, ಶೇಖರ್ ನಾಯ್ಕ್ ಸೇರಿದಮತೆ ಇನ್ನಿತರರು ಉಪಸ್ಥಿತರಿದ್ದರು.