ಜಾನುವಾರು ಶೆಡ್ ನಿರ್ಮಾಣಕ್ಕೆ ಸಹಾಯಧನ ಹೆಚ್ಚಳ

ಕಾರವಾರ: ಗ್ರಾಮೀಣ ಪ್ರದೇಶದ ಜನರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿಕೊಳ್ಳಬಹುದಾದ ಜಾನುವಾರು ಶೆಡ್‌ನ ಸಹಾಯಧನದ ಮೊತ್ತವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯು 57 ಸಾವಿರಕ್ಕೆ ಹೆಚ್ಚಿಸಿದ್ದು, ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ. ತಿಳಿಸಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾಮೀಣ ಭಾಗದಲ್ಲಿ ರೈತರು ಕೃಷಿ ಚಟುವಟಿಕೆ ಜೊತೆಗೆ ಜಾನುವಾರುಗಳನ್ನು ಸಾಕಿ ಉಪಕಸುಬು ಮಾಡಿಕೊಂಡಿರುತ್ತಾರೆ. ಇಂಥಹ ಉಪಕಸುಬಿಗೆ ಪೂರಕವಾಗುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನರೇಗಾದಡಿ ಜಾನುವಾರು ಶೆಡ್ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯ ಕಲ್ಪಿಸಿದೆ. ಈ ಹಿಂದೆ ದನದ ಶೆಡ್ ನಿರ್ಮಿಸಿಕೊಳ್ಳಲು ನರೇಗಾದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ರೂ. 43 ಸಾವಿರ ಹಾಗೂ ಸಾಮಾನ್ಯ ವರ್ಗದವರಿಗೆ 19 ಸಾವಿರ ರೂ. ಸಹಾಯಧನ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ 2022ರ ಆದೇಶದಲ್ಲಿ ಹಿಂದಿನ ಸಹಾಯಧನದ ಮೊತ್ತವನ್ನ 57 ಸಾವಿರ ರೂ. ಕ್ಕೆ ಹೆಚ್ಚಿಸಿದ್ದಲ್ಲದೇ ಎಲ್ಲ ವರ್ಗದವರಿಗೂ ಸಮಾನವಾಗಿ ಸಹಾಯಧನ ದೊರಕುವಂತೆ ಮಾಡಲಾಗಿದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ಯೋಗ ಚೀಟಿ ಹೊಂದಿದವರು ಹಾಗೂ 4 ಅಥವಾ 4 ಕ್ಕಿಂತ ಹೆಚ್ಚು ಜಾನುವಾರು ಸಾಕಿದ ಪ್ರತಿಯೊಬ್ಬರೂ ಜಾನುವಾರು ಶೆಡ್ ನಿರ್ಮಿಸಿಕೊಂಡು ರೂ. 57 ಸಾವಿರ ಸಹಾಯಧನದ ಸೌಲಭ್ಯ ಪಡೆಯಬಹುದಾಗಿದೆ. ಜೊತೆಗೆ ಪಶು ವೈದ್ಯಾಧಿಕಾರಿಗಳಿಂದ ಜಾನುವಾರುಗಳು ಇರುವ ಕುರಿತು ದೃಢೀಕರಣ ಪತ್ರ ಪಡೆದಿರಬೇಕು. ಈ ದಾಖಲೆಗಳಿರುವ ಫಲಾನುಭವಿಗಳು ಸ್ಥಳೀಯ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು. ಈ ಸ್ವೀಕೃತ ಅರ್ಜಿಯನ್ನು ಗ್ರಾಮ ಪಂಚಾಯತಿಯವರು ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಿಕೊಂಡು ಮೇಲಾಧಿಕಾರಿಗಳಿಂದ ಅನುಮೋದನೆ ಪಡೆದ ನಂತರ ಕಾಮಗಾರಿ ಅನುಷ್ಠಾನಗೊಳ್ಳುತ್ತದೆ.

ಜಾನುವಾರು ಶೆಡ್ ನಿರ್ಮಾಣಕ್ಕೆ ನರೇಗಾದಡಿ ಎಲ್ಲರಿಗೂ ಸಮಾನವಾಗಿ ಸಹಾಯಧನ ಹೆಚ್ಚಳವಾಗಿದೆ. ಈ ಹಿಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆರೂ. 43 ಸಾವಿರ ಹಾಗೂ ಸಾಮಾನ್ಯ ವರ್ಗದವರಿಗೆ ರೂ. 19 ಸಾವಿರ ಸಹಾಯಧನವಿತ್ತು. ಆದರೆ ಪ್ರಸ್ತುತ 2022ರ ಪರಿಷ್ಕೃತ ಆದೇಶದಲ್ಲಿ ಎಲ್ಲರಿಗೂ ಸಮಾನವಾಗಿ 57 ಸಾವಿರ ರೂ. ಸಹಾಯಧನ ಸಿಗಲಿದೆ.

ನರೇಗಾದಡಿ ನಿರ್ಮಿಸಲಾಗುವ ಜಾನುವಾರು ಶೆಡ್ 10 ಅಡಿ ಅಗಲ, 18 ಅಡಿ ಉದ್ದಗೋಡೆ, 5 ಅಡಿ ಎತ್ತರದ ಗೋಡೆ ಹಾಗೂ ಗೋದಲಿ(ದಣಕಲು, ಮೇವು ತೊಟ್ಟಿ) ಒಳಗೊಂಡಿರಬೇಕು. ಜೊತೆಗೆ ಜಾನುವಾರುಗಳಿಗೆ ಗಾಳಿ ಅಡಲು ಜಾಗವಿರವಂತೆ ಶೆಡ್‌ಗೆ ಶೀಟ್‌ಗಳನ್ನು ಅಳವಡಿಸಬೇಕು. ಜಾನುವಾರು ಶೆಡ್ ನಿರ್ಮಾಣಕ್ಕೆ ನರೇಗಾದಡಿ ಫಲಾನುಭವಿಗಳಿಗೆ ಸಿಗುವ ಒಟ್ಟುರೂ. 57 ಸಾವೀರ ಸಹಾಯಧನದಲ್ಲಿ 10,556 ರೂ. ಕೂಲಿ ಹಾಗೂ 46,444 ರೂ. ಸಾಮಗ್ರಿ ಮೊತ್ತ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.