ಸ್ವಾತಂತ್ರ ಹೋರಾಟಗಾರರ ವೇಷಭೂಷಣಗಳಲ್ಲಿ ಮಿಂಚಿದ ಪುಟ್ಟ ಮಕ್ಕಳು

ಕುಮಟಾ: ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟಿನ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರದಲ್ಲಿ ನರ್ಸರಿ, ಎಲ್.ಕೆ.ಜಿ ಹಾಗೂ ಯುಕೆಜಿ ಮಕ್ಕಳಿಗಾಗಿ ಪ್ರತಿಭಾ ಪ್ರದರ್ಶನ ವೇದಿಕೆಯಡಿ ಛದ್ಮವೇಷ ಕಾರ್ಯಕ್ರಮ ರಾಷ್ಟ್ರಭಕ್ತಿಯ ಪ್ರೇರಣೆಯಾಗಿ ಸುಂದರವಾಗಿ ಮೂಡಿಬಂತು.

ಸರ್ಕಾರಿ ಆಸ್ಪತ್ರೆಯ ಡಾ. ಶಿಲ್ಪಾ ಉಪ್ಪೂರ ಛದ್ಮವೇಷ ಕಾರ್ಯಕ್ರಮ ಉದ್ಘಾಟಿಸಿ, ಮುಗ್ಧ ಮಕ್ಕಳು ವೈವಿಧ್ಯಮಯ ವೇಷಭೂಷಣ ಹಾಕಿಕೊಂಡು ಹೊಸ ಆದರ್ಶದ ಕಲ್ಪನೆಗಳನ್ನು ಕಟ್ಟಿಕೊಳ್ಳುವುದಕ್ಕೆ ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.

ಮಕ್ಕಳು ದೇಶದ ಸ್ವಾತಂತ್ರ‍್ಯ ಹೋರಾಟಗಾರರು, ವಿದೇಶ ಆಕ್ರಮಣಕಾರರ ವಿರುದ್ಧ ಹೋರಾಡಿದ ವೀರ ವನಿತೆಯರು, ರಾಜರು, ಪ್ರಮುಖ ಸಾಧಕರು, ಸೈನಿಕರು, ರೈತರು, ಪಕ್ಷಿ, ಪ್ರಾಣಿ, ತರಕಾರಿ ಸೇರಿದಂತೆ ಎಲ್ಲ ವರ್ಗದ ಜನಸಮುದಾಯವನ್ನು ಪ್ರತಿಬಿಂಬಿಸುವ ವೇಷಭೂಷಣಗಳಲ್ಲಿ ಮಿಂಚಿದರು. ರಾಮಾಯಣ, ಮಹಾಭಾರತದ ಪೌರಾಣಿಕ ಪಾತ್ರಗಳನ್ನು ಹಾಕಿ ಜೈಕಾರ ಹಾಕಿದರು. ದೇಶ ಭಕ್ತಿಯ ಘೋಷಣೆಗಳು ಚಿಕ್ಕ ಮಕ್ಕಳ ಬಾಯಲ್ಲಿ ನಲಿಯಿತು.