ಕುಮಟಾ: ತಾಲೂಕಿನ ಕಲಭಾಗ ಗ್ರಾ.ಪಂ ಅನುದಾನದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಟಿಕೆಗಳನ್ನು, ವಿಶೇಷ ಚೇತನರಿಗೆ ಮಂಚ ಹಾಗೂ ಗ್ರಂಥಾಲಯಕ್ಕೆ ಕ್ರೀಡಾ ಸಾಮಗ್ರಿಗಳನ್ನು ಗ್ರಾ.ಪಂ ಸಭಾಭವನದಲ್ಲಿ ವಿತರಿಸಲಾಯಿತು.
ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷೆ ಗೀತಾ ಕುಬಾಲ ಗ್ರಾ.ಪಂ ವ್ಯಾಪ್ತಿಯ 7 ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಆಟವಾಡಲು ಆಟಿಕೆಗಳನ್ನು ವಿತರಿಸಲಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಅಲ್ಲದೇ ವಿಶೇಷ ಚೇತನರಿಗೆ ಮಂಚ ನೀಡಲಾಗಿದೆ ಹಾಗೂ ಗ್ರಂಥಾಲಯಕ್ಕೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಗಿದೆ. ಜನರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ತಾ.ಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರತ್ನಾ ನಾಯಕ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ನೈತಿಕತೆಯ ಮಟ್ಟ ಕುಸಿಯುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ಸಾಮಾನ್ಯ ಜ್ಞಾನದ ಜತೆ ಓದುವ ಹವ್ಯಾಸ ರೂಢಿಸಿಕೊಳ್ಳಲು ಪ್ರತಿ ಗ್ರಾ.ಪಂ ನ ಗ್ರಂಥಾಲಯ ಉನ್ನತೀಕರಿಸಲು ವಿಶೇಷ ಮಹತ್ವ ನೀಡಲಾಗಿದೆ ಎಂದರು.
ಗ್ರಾ. ಪಂ ಸದಸ್ಯರಾದ ವಿರೂಪಾಕ್ಷ ನಾಯ್ಕ, ವಿಜಯಾನಂದ ತೋರಸ್ಕರ, ಗೌರೀಶ ಕುಬಾಲ, ಲಿಂಗಪ್ಪ ನಾಯ್ಕ, ಪ್ರಮೀಳಾ ನಾಯ್ಕ, ರಾಘವೇಂದ್ರ ನಾಯ್ಕ, ಕಮಲಾ ಗಾವಡಿ, ಮಂಜುಳಾ ಮುಕ್ರಿ ಮತ್ತಿತರರು ಉಪಸ್ಥಿತರಿದ್ದರು.