ಭಟ್ಕಳ: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಗೈರಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಭಟ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ಮೂಲದ ಸತೀಶ ಸಾಜಿ ಬಂಧಿತ ಆರೋಪಿ.
ಈತನ ವಿರುದ್ಧ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಪ್ರಕರಣಗಳು ದಾಖಲಾಗಿದ್ದವು. ಭಟ್ಕಳ ಶಹರ ಪೋಲಿಸರು ಕಾರ್ಕಳದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸುಮಾರು 4 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಆರೋಪಿ ತಲೆ ಮರೆಸಿಕೊಂಡಿದ್ದ. ಪೊಲೀಸರು ಈತನ ಹುಡುಕಾಟ ನಡೆಸುತ್ತಿದ್ದರು. ನ್ಯಾಯಾಲಯ ಪ್ರೊಕ್ಲಮೆಷನ್ ವಾರೆಂಟ್ ಹೊರಡಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಶಹರ ಠಾಣೆ ಪೊಲೀಸ್ ನಿರೀಕ್ಷಕ ದಿವಾಕರ ಮಾರ್ಗದರ್ಶನದಲ್ಲಿ ಠಾಣೆಯ ಸಿಬ್ಬಂದಿಗಳಾದ ಗಿರೀಶ ಅಂಕೋಲೆಕರ ಮತ್ತು ಈರಣ್ಣ, ಕಾರ್ಕಳ ಪೊಲೀಸರ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿ ಸತೀಶ ಸಾಜಿಯನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಸದ್ಯ ಕಾರವಾರ ಜೈಲಿಗೆ ಕಳುಹಿಸಲಾಗಿದೆ.