ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ – ಕಾಗೇರಿ

ಶಿರಸಿ: ಮೇಲ್ದರ್ಜೆಗೇರಿದ ಪಂಡಿತ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಪರಿಶೀಲಿಸಿದರು. ನಗರದ ರಾಯಪ್ಪ ಹುಲೇಕಲ್ ಶಾಲೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ತುರ್ತು ಚಿಕಿತ್ಸಾ ಘಟಕದ ಕಟ್ಟಡದ ಕಾಮಗಾರಿ ವೀಕ್ಷಿಸಿ ಮಾಹಿತಿ ಪಡೆದರು.

ಯೋಜನಾಬದ್ಧವಾಗಿ ಕೆಲಸ ನಡೆಯಬೇಕು. ವಿಳಂಬ ಧೋರಣೆ ಅನುಸರಿಸರಿಸದೇ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಇದೆ. ಈಗಾಗಲೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಜೊತೆ ಚರ್ಚಿಸಲಾಗಿದ್ದು, ಅವರು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಸ್ಪತ್ರೆ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಕಾಗೇರಿ ಈ ವೇಳೆ ತಿಳಿಸಿದರು.

ಇನ್ನು ಜಿಲ್ಲೆಗೆ ಟ್ರಾಮಾ ಸೆಂಟರ್ ನಿರ್ಮಾಣದ ಬೇಡಿಕೆಯೂ ಇದೆ. ಭೌಗೋಳಿಕ ಸ್ಥಿತಿ, ಅಪಘಾತ ಪ್ರಕರಣ, ತುರ್ತು ಚಿಕಿತ್ಸೆಗಳ ಅಂಕಿ-ಸಂಖ್ಯೆಗಳನ್ನುಗಮನಿಸಿ ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣವಾಗಲಿದೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಟ್ಟಾಗಿ ಚರ್ಚಿಸಿ ಆರೋಗ್ಯ ಕ್ಷೇತ್ರ ಸುಧಾರಣೆಗೆ ಕ್ರಮ ವಹಿಸಲಿದ್ದೇವೆ ಎಂದರು.