ಶಿರಸಿ: ತಾಲೂಕಿನ ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕಟ್ಟಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆ ಶಿಥಿಲಗೊಂಡು ಬೀಳುವ ಸ್ಥಿತಿ ತಲುಪಿದೆ. ಅನಾಹುತ ಸಂಭವಿಸುವ ಮೊದಲೇ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಲೆಯ ಅಡುಗೆ ಕೋಣೆ ಶಿಥಿಲಗೊಂಡು ಹಲವು ವರ್ಷಗಳಾಗಿದೆ. ಹಂಚುಗಳು ಒಡೆದಿದ್ದು ಜಂತಿಗಳು ತುಂಡಾಗುವ ಸ್ಥಿತಿಯಲ್ಲಿದೆ. ಅಲ್ಲದೆ ಮಳೆಗಾಲದಲ್ಲಿ ಮಳೆ ನೀರು ಗೋಡೆ ಮೇಲೆ ಹರಿದು ಬರುತ್ತಿದೆ. ಜೊತೆಗೆ ಹಂಚುಗಳ ಮೇಲಿನಿಂದ ಮಳೆ ನೀರು ಎಲ್ಲೆಂದರಲ್ಲಿ ತೊಟ್ಟಿಕ್ಕುತ್ತಿದೆ. ಹೀಗಾಗಿ ಅಡುಗೆ ಮಾಡುವುದಕ್ಕೂ ಸಿಬ್ಬಂದಿ ಪರದಾಡುವಂತಾಗಿದೆ.
ಇನ್ನು ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ ಪರ್ಯಾಯ ಕಟ್ಟಡ ಮಂಜೂರಿ ಮಾಡುವಂತೆ ಶಾಲಾ ಅಭಿವೃದ್ದಿ ಸಮಿತಿ ಹಲವು ಭಾರಿ ಸಂಬಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದೆ. ಆದರೆ ಈ ವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಜೋರಾದ ಗಾಳಿ ಮಳೆ ಬಂದರೆ ಹಾರಿಹೋಗುವ ಇಲ್ಲವೆ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡವನ್ನು 2018 ರಲ್ಲಿಯೇ ತೆರವುಗೊಳಿಸುವಂತೆ ಪಂಚಾಯತ್ ರಾಜ್ ಇಲಾಖೆಯಿಂದ ಶಾಲಾ ಸಮಿತಿಗೆ ಪತ್ರ ಬರೆಯಲಾಗಿದೆ. ಆದರೆ ಪರ್ಯಾಯವಾಗಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಕೋಣೆ ಕೆಡವಿದರೆ ಮುಂದೆ ಅಡುಗೆ ಮಾಡುವುದು ಎಲ್ಲಿ ಎಂಬುದನ್ನು ಸೂಚಿಸಿಲ್ಲ. ಹೀಗಾಗಿ ಇದೇ ಕೋಣೆಯಲ್ಲಿ ಅಡುಗೆ ಮಾಡಲಾಗುತ್ತಿದೆ.
ಶಾಲೆಯಲ್ಲಿ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತಿನಿತ್ಯ ಇಲ್ಲಿಯೇ ಅಡುಗೆ ಮಾಡುವುದರಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡಕ್ಕೆ ಅನುದಾನ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.