ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಅವರು ಆಯ್ಕೆಯಾಗಿದ್ದಾರೆ. ಬುಧವಾರ ಶ್ರೀಲಂಕಾ ಸಂಸತ್ತಿನಲ್ಲಿ ನಡೆದ ಚುನಾವಣೆಯಲ್ಲಿ ತ್ರಿಕೋನ ಸ್ಪರ್ದೆ ಏರ್ಪಟ್ಟಿತ್ತು. ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿರುವ ರನಿಲ್ ವಿಕ್ರಮಸಿಂಘೆ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆಗೊಂಡಿದ್ದಾರೆ.
225 ಸದಸ್ಯ ಬಲದ ಶ್ರೀಲಂಕಾ ಸಂಸತ್ ನಲ್ಲಿ ವಿಕ್ರಮ ಸಿಂಘೆ 134 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಪ್ರತಿಸ್ಪರ್ದಿ ಭಿನ್ನಮತೀಯ ನಾಯಕ ಡಲ್ಲಾಸ್ ಅಲಹಪ್ಪೆರುಮಾ 82 ಮತಗಳನ್ನು ಪಡೆದಿದ್ದಾರೆ. ಇನ್ನು ಎಡಪಕ್ಷ ಜನತಾ ವಿಮುಕ್ತಿ ಪೆರಮುನ ನಾಯಕ ಅನುರ ಕುಮಾರ ಡಿಸ್ಸಾನಾಯಕ ಕೇವಲ ಮೂರು ಮತಗಳನ್ನು ಪಡೆದಿದ್ದಾರೆ.
ಈ ನಿರ್ಣಾಯಕ ಚುನಾವಣೆಯಲ್ಲಿ 225 ರ ಪೈಕಿ 223 ಶಾಸಕರು ಮತ ಚಲಾಯಿಸಿದ್ದರು. ಇಬ್ಬರು ಸಂಸದರು ಮತದಾನಕ್ಕೆ ಗೈರಾಗಿದ್ದರು. ನಾಲ್ಕು ಮತಗಳು ತಿರಸ್ಕೃತಗೊಂಡು ಒಟ್ಟು 219 ಮತಗಳು ಮಾತ್ರ ಮಾನ್ಯವಾಗಿದ್ದವು. 44 ವರ್ಷಗಳಲ್ಲಿ ಶ್ರೀಲಂಕಾ ಸಂಸತ್ತು ನೇರವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡುತ್ತಿರುವುದು ಇದೇ ಮೊದಲು.
ರಾಜಕೀಯ ಬಿಕ್ಕಟ್ಟಿನಿಂದ ದ್ವೀಪ ರಾಷ್ಟ್ರದಲ್ಲಿ ಉಂಟಾದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯ ನಡುವೆ ರಹಸ್ಯ ಮತದಾನ ನಡೆಯಿತು.