ಶ್ರೀಲಂಕಾ: ಅರಾಜಕತೆಯಿಂದ ಕಂಗೆಟ್ಟಿದ್ದ ಶ್ರೀಲಂಕಾದಲ್ಲಿ ಇದೀಗ ಅಧ್ಯಕ್ಷ ಹುದ್ದೆಗೆ ಚುನಾವಣೆ ಆರಂಭವಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಶ್ರೀಲಂಕಾ ಮಂದಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಗೊಟಬಯ ರಾಜಪಕ್ಸ ಲಂಕಾದಿಂದ ಪಲಾಯನ ಮಾಡಿದ್ದರು. ಬಳಿಕ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿಯಾಗಿ ರನಿಲ್ ವಿಕ್ರಮ್ ಸಿಂಘೆಯವರನ್ನ ಸ್ಪೀಕರ್ ನೇಮಕ ಮಾಡಿದ್ದರು.
ಇನ್ನು ಗೋಟಬಯ ರಾಜೀನಾಮೆಯಿಂದ ತೆರವಾಗಿರುವ ಅಧ್ಯಕ್ಷರ ಆಯ್ಕೆಗೆ ಬಿರುಸಿನ ಮತದಾನ ಪ್ರಾರಂಭವಾಗಿದೆ. ಸ್ಪರ್ಧೆಯಲ್ಲಿ ಹಂಗಾಮಿ ಅಧ್ಯಕ್ಷ, ಪೊದುಜನ ಪೆರಮುನ ಪಕ್ಷ – ರನಿಲ್ ವಿಕ್ರಮಸಿಂಘೆ, ಸಿಂಹಳ ಬುದ್ಧಿಸ್ಟ್ ನ್ಯಾಷನಲ್ ಪಾರ್ಟಿ – ಡಲ್ಲಾಸ್ ಅಲಹೆಪ್ಪೆರುಮ ಮತ್ತು ಜನತಾ ವಿಮುಕ್ತಿ ಪೆರುಮುನ ಪಕ್ಷ – ಅನುರ ಕುಮಾರ ದಿಸ್ಸನಾಯಕೆ ಹಾಲಿ ಕಣದಲ್ಲಿದ್ದಾರೆ.
ಈ ನಡುವೆ ಸಮಗಿ ಜನ ಬಲವೇಗಯಾ ಪಕ್ಷದ ಸಜಿತ್ ಪ್ರೇಮದಾಸ ತಮ್ಮ ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ. ಇದರೊಂದಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 225 ಸದಸ್ಯ ಬಲದ ಲಂಕಾ ಸಂಸತ್‌ನಲ್ಲಿ ಆಡಳಿತಾರೂಢ ಎಸ್‌ಎಲ್‌ಪಿಪಿ ಪಕ್ಷದ 100 ಸದಸ್ಯರಿರುವ ಕಾರಣ, ಎಲ್ಲಾ ಸಂಸದರು ರನಿಲ್ ಪರ ಮತ ಚಲಾಯಿಸಿ, ವಿಪಕ್ಷಗಳ ಮತ ವಿಭಜನೆಯಾದರೆ ರನಿಲ್ ವಿಕ್ರಮಸಿಂಘೆ ಸುಲಭವಾಗಿ ಜಯಸಾಧಿಸುವ ಸಾಧ್ಯತೆ ಇದೆ.