ಬೆಂಗಳೂರು: ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ರಾಜ್ಯದ ಮುಖ್ಯಮಂತ್ರಿ, ಸಚಿವರು, ಶಾಸಕರ ವಿರುದ್ಧ ರಾಜ್ಯ ಕಾಂಗ್ರೆಸ್ ಘಟಕ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ ಮಾಧ್ಯಮಗಳೊಂದಿಗೆ ಮಾತನಾಡಿ ‘ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಬಿಜೆಪಿಯ ಎಲ್ಲಾ ಶಾಸಕರನ್ನ ಹೋಟೆಲ್ ಗೆ ಕರೆಸಿ ಉಪಚರಿಸಿ ಮನರಂಜನೆ ನೀಡಲಾಗಿದೆ. ಈ ಎಲ್ಲಾ ವೆಚ್ಚವನ್ನು ಮುಖ್ಯಮಂತ್ರಿ ಹಾಗೂ ಬಿಜೆಪಿ ಭರಿಸಿದೆ. ಜೊತೆಗೆ ಇದೇ ರೀತಿ ಮತದಾನ ಮಾಡಬೇಕು ಎಂದು ತರಬೇತಿ ನೀಡಲಾಗಿದೆ. ಎನ್ ಡಿ ಎ ಅಭ್ಯರ್ಥಿ ಸಮ್ಮತಿ ಆಧಾರದಲ್ಲಿ ಇದನ್ನ ಮಾಡಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ’ ಎಂದು ತಿಳಿಸಿದರು.
ಸೆಕ್ಷನ್ 171 ಬಿ (ಮತ ಪಡೆಯಲು ಆಮಿಷ), 171 ಸಿ (ಪ್ರಭಾವ ಬೀರಲು ಯತ್ನ), 171 ಇ (ಮತದಾರರಿಗೆ ಆಮಿಷ), 171 ಎಫ್ (ಅನಗತ್ಯವಾಗಿ ಪ್ರಭಾವ) ಪ್ರಕಾರ ಕ್ರಮ ಜರುಗಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ರಾಜ್ಯ ಘಟಕ ದೂರು ನೀಡಿದೆ.
ಮುಂದುವರೆದು ಮಾತನಾಡಿದ ಉಗ್ರಪ್ಪ ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಯಬೇಕು. ಯಾವುದೇ ಆಮಿಷ, ಒತ್ತಡ ಹಾಕಿದರೆ ಅದು ಅಪರಾಧವಾಗುತ್ತದೆ. ಇದು ಜನತಾ ಪ್ರಾತಿನಿಧ್ಯ ಕಾಯ್ದೆ, ಐಪಿಸಿ ಸೆಕ್ಷನ್ ಹಾಗೂ ಅಧ್ಯಕ್ಷೀಯ ಚುನಾವಣಾ ಕಾಯ್ದೆಯಲ್ಲಿ ಪ್ರಸ್ತಾಪವಾಗಿದೆ’ ಎಂದರು.
ಇನ್ನು ರಾಜ್ಯ ವಿಧಾನಸೌಧದಲ್ಲಿ ನಡೆದ ಮತದಾನದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಕೊಟ್ಟಿರುವ ಎಲ್ಲ ಮತಗಳನ್ನು ಅಸಿಂಧು ಎಂದು ಪರಿಗಣಿಸಬೇಕು. ಈ ಬಗ್ಗೆ ನಮ್ಮ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದಾಗಿ ಉಗ್ರಪ್ಪ ತಿಳಿಸಿದ್ದಾರೆ.