ಪೋಸ್ಟರ್‌ನಿಂದ ಮುಜುಗರಕ್ಕೊಳಗಾದ ಬಿಬಿಎಂಪಿ.! ಕೊನೆಗೂ ಎಚ್ಚೆತ್ರಾ ಅಧಿಕಾರಿಗಳು.?

ಬೆಂಗಳೂರು: ಐಟಿಸಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ರಸ್ತೆಗಳು ಗುಂಡಿ ಬಿದ್ದಿದೆ. ಮಲ್ಲೇಶ್ವರಂ ಮತ್ತು ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಂತೂ ಬಿಬಿಎಂಪಿ ಅನೇಕ ಕಾಮಗಾರಿಗಾಗಿ ರಸ್ತೆಗಳಲ್ಲಿ ತೆಗೆದ ಹೊಂಡಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿತ್ತು. ರಸ್ತೆಗುಂಡಿಗಳಿಂದ ರೋಸಿ ಹೋದ ಜನ ಬಿಬಿಎಂಪಿಗೆ ಹಿಡಿಶಾಪ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.

ಇನ್ನು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಪೋಸ್ಟರ್ ಒಂದು ಸಾಕಷ್ಟು ಸದ್ದು ಮಾಡಿತ್ತು. ಅವಾಚ್ಯವಾಗಿ ನಿಂದಿಸುವ ಪೋಸ್ಟರ್‌ಗಳನ್ನ ಎಲೆಕ್ಕ್ರಿಕ್ ಬಾಕ್ಸ್ ಗಳ ಮೇಲೆ ಅಂಟಿಸಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರು.

ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಕಡೆಗೂ ಮರ್ಯಾದೆ ಉಳಿಸಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳು ಪೋಸ್ಟರ್‌ಗಳನ್ನ ತೆರವುಗೊಳಿಸಿ ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಹಚ್ಚಲು ಮುಂದಾಗಿದ್ದಾರೆ. ಅಲ್ಲಲ್ಲಿ ಕಾಟಾಚಾರಕ್ಕೆ ರಸ್ತೆಗುಂಡಿಗಳಿಗೆ ಜಲ್ಲಿ ಕಲ್ಲುಗಳನ್ನು ತಂಬಲಾಗುತ್ತಿದೆ.

ಒಟ್ಟಾರೆ ಫೇಸ್‌ಬುಕ್ ಪೋಸ್ಟರ್ ಅಧಿಕಾರಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಇನ್ನಾದರೂ ಜನ ಬೈಯ್ಯುವ ಮುನ್ನ ಅಧಿಕಾರಿಗಳೇ ಎಚ್ಚೆತ್ತುಕೊಂಡ್ರೆ ಬಿಬಿಎಂಪಿ ಮುಜುಗರಕ್ಕೊಳಗಾಗುವುದು ತಪ್ಪಬಹುದು.