ಶಿರಸಿ : ರಾಜ್ಯದ 1500 ಶಾಲೆಗಳನ್ನ ಮಾದರಿ ಶಾಲೆಗಳನ್ನಾಗಿಸುವ ಗುರಿ ಸರ್ಕಾರದ ಮುಂದಿದೆ. ಶೀಘ್ರದಲ್ಲಿಯೇ ಇದನ್ನ ಕಾರ್ಯರೂಪಕ್ಕೆ ತರಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
ನಗರದ ಮಾರಿಕಾಂಬಾ ದೇವಾಲಯಕ್ಕೆ ಬುಧವಾರ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮಾದರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಕಲಿಸಲಾಗುವುದು. ಪ್ರತಿ ತರಗತಿಗೆ ಒಬ್ಬ ಶಿಕ್ಷಕರನ್ನು ಒದಗಿಸಲಾಗುವುದು. ಈಗಿರುವ ಶಾಲೆಗಳಲ್ಲಿಯೇ ಮಾದರಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂದರು.
ಇನ್ನು ಪಠ್ಯ ಪುಸ್ತಕ ಪರಿಷ್ಕರಣೆ ಕಾಲ ಕಾಲಕ್ಕೆ ಆಗುತ್ತಲೇ ಇದೆ. ಬ್ರಿಟೀಷರು ಬಿಟ್ಟುಹೋದ ಶಿಕ್ಷಣ ಪದ್ಧತಿಯನ್ನೇ ನಾವೂ ಮುಂದುವರಿಸುತ್ತಿರುವುದು ದುರಾದೃಷ್ಟ. ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಈ ಹಿಂದೆಯೂ ಪರಿಷ್ಕರಣೆ ಆಗಿತ್ತು. ಆದರೆ ನಾವು ಚರ್ಚೆ ನಡೆಸುತ್ತಿದ್ದೆವು ಹೊರತೂ ಈಗಿನ ವಿರೋಧ ಪಕ್ಷಗಳಂತೆ ಬೀದಿಯಲ್ಲಿ ನಿಂತು ಕೂಗುತ್ತಿರಲಿಲ್ಲ ಎಂದರು. ಶಿಕ್ಷಣದಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಪ್ರಯತ್ನ ನಾವು ಮಾಡಿದ್ದೇವೆ. ಆದರೆ ವಿರೋಧ ಪಕ್ಷಗಳು ಪಠ್ಯ ಪರಿಷ್ಕರಣೆಯನ್ನು ರಾಜಕೀಯಗೊಳಿಸುತ್ತಿರುವುದು ದುರಾದೃಷ್ಟ ಎಂದರು.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ ಸಚಿವರನ್ನು ಸನ್ಮಾನಿಸಿದರು. ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿಗಳು ಈ ವೇಳೆ ಹಾಜರಿದ್ದರು.