ಯಲ್ಲಾಪುರ – ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕವಡಿಕೆರೆಯ ದಡದಲ್ಲಿ ಮಣ್ಣು ಕುಸಿಯಲಾರಂಭಿಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಕವಡಿಕೆರೆ ದುರ್ಗಾಂಬಿಕಾ ದೇವಸ್ಥಾನದ ಹಿಂಭಾಗದ ಕೆರೆಯ ದಡದಲ್ಲಿರುವ ರಸ್ತೆಯಲ್ಲಿ ಕಳೆದ ಎರಡು ದಿನಗಳಿಂದ ಬಿರುಕು ಕಾಣಿಸಿಕೊಂಡಿದೆ. ಬುಧವಾರ ಬೆಳಗ್ಗೆಯಿಂದ ಮಣ್ಣು ಕುಸಿಯುತ್ತಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಕವಡಿಕೆರೆ ಗ್ರಾಮ ಜನರ ಅಡಿಕೆ ತೋಟವಿದೆ.
ಒಂದು ವೇಳೆ ಕುಸಿತ ಮುಂದುವರಿದರೆ ಕೆರೆಯ ನೀರು ತೋಟದತ್ತ ನುಗ್ಗುವ ಅಪಾಯವಿದೆ. ಸ್ಥಳೀಯರ ತೋಟವಷ್ಟೇ ಅಲ್ಲದೇ, ಕೆಳಭಾಗದಲ್ಲಿರುವ ಹುಲೆಕೋಣೆ ಭಾಗದ ಗದ್ದೆಗಳೂ ಜಲಾವೃತವಾಗುವ ಅಪಾಯವಿದೆ.
ಸಂಬಂಧಪಟ್ಟವರು ಈ ಕುರಿತು ಗಮನ ಹರಿಸಿ, ಸದ್ಯ ಕುಸಿತ ಮುಂದುವರಿಯದಂತೆ ತಾತ್ಕಾಲಿಕ ಕ್ರಮ ಕೈಗೊಳ್ಳಬೇಕು. ಮಳೆಗಾಲದ ನಂತರ ತಡೆಗೋಡೆ ನಿರ್ಮಿಸಿ ಕುಸಿಯದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.