ಹೊನ್ನಾವರ – ಪಟ್ಟಣದ ಗೇರುಸೊಪ್ಪಾ ವೃತ್ತದ ಬಳಿ ಸಕ್ಕರೆ ಚೀಲ ತುಂಬಿದ ಲಾರಿ ಪಲ್ಟಿಯಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಹಾರಾಷ್ಟ್ರದಿಂದ ಮಂಗಳೂರು ಕಡೆ ಸಕ್ಕರೆ ಚೀಲ ತುಂಬಿಕೊಂಡು ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ನಿಯಂತ್ರಣ ತಪ್ಪಿದ ಲಾರಿಯು ಗೇರುಸೊಪ್ಪ ತಿರುವಿನಲ್ಲಿರುವ ವಿದ್ಯುತ್ ಟ್ರಾನ್ಸಫಾರ್ಮರ್ ಗೆ ಡಿಕ್ಕಿ ಹೊಡೆದು ಒಂದು ವಿದ್ಯುತ್ ಕಂಬ ಮುರಿದು ಬಿದ್ದಿದೆ. ಇದರಿಂದ ಟ್ರಾನ್ಸ್‌ಫಾರ್ಮರ್ ಸುಟ್ಟುಹೋಗಿದ್ದು ಕೆಲಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಇನ್ನು ಹೆದ್ದಾರಿಯಲ್ಲಿ ವಾಹನದ ಆಯಿಲ್ ಸೋರಿಕೆಯಾಗಿದೆ. ಅಪಘಾತದಲ್ಲಿ ಚಾಲಕ ಮತ್ತು ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಸಕ್ಕರೆ ಚೀಲಗಳನ್ನು ಬೇರೆ ಲಾರಿಗೆ ಶಿಪ್ಟ್ ಮಾಡಲಾಗಿದೆ. ಕ್ರೇನ್ ಮೂಲಕ ಲಾರಿ ತೆರವು ಮಾಡುವ ಮೂಲಕ ರಸ್ತೆ ಸಂಚಾರ ಸುಗಮವಾಯಿತು.