ಶ್ರೀಲಂಕಾದಲ್ಲಿ ಉಂಟಾಗಿರುವ ರಾಜಕೀಯ ಅಸ್ಥಿರತೆ ವಿಚಾರವಾಗಿ ಭಾರತ ಮಧ್ಯಪ್ರವೇಶಿಸಲು ತಮಿಳುನಾಡು ರಾಜಕೀಯ ಪಕ್ಷಗಳು ಒತ್ತಾಯಿಸಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜುಲೈ 19, ಮಂಗಳವಾರದಂದು ಸರ್ವಪಕ್ಷಗಳ ಸಭೆ ಕರೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭಾಗಿಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.
ಶ್ರೀಲಂಕಾದಲ್ಲಿ ಅತಿದೊಡ್ಡ ರಾಜಕೀಯ ಅಸ್ಥಿರತೆ ಹಾಗೂ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಜೊತೆಗೆ ಇವೆಲ್ಲದರಿಂದ ರೋಸಿಹೋಗಿರುವ ಶ್ರೀಲಂಕಾ ಜನತೆ ಪ್ರತಿಭಟನೆ ನಡೆಸುತ್ತಿದ್ದು 100 ದಿನಗಳನ್ನ ಪೂರೈಸಿದೆ. ಈ ಮಧ್ಯೆ ಪ್ರಧಾನಿ ಗೊಟಬಯ ರಾಜಪಕ್ಸ ಪಲಾಯನ ಮಾಡಿ ಸಿಂಗಾಪುರಕ್ಕೆ ತೆರಳಿ ಪ್ರಧಾನಿ ಸ್ಥಾನಕ್ಕೆ ಅಲ್ಲಿಂದ ರಾಜಿನಾಮೆ ನೀಡಿ ಸ್ಪೀಕರ್‌ಗೆ ಈಮೇಲ್ ಮಾಡಿದ್ದರು.
ಹೀಗಾಗಿ ತಮಿಳುನಾಡಿನ ಡಿಎಂಕೆ ಮತ್ತು ಎಐಎಡಿಎಂಕೆ ಸೇರಿದಂತೆ ವಿವಿಧ ಪಕ್ಷಗಳು ಶ್ರೀಲಂಕಾ ಬಿಕ್ಕಟ್ಟಿನ ವಿಚಾರದಲ್ಲಿ ಸಭೆ ನಡೆಸಿವೆ. ಭಾರತ ಸಮಸ್ಯೆ ಪರಿಹಾರಕ್ಕೆ ಏನಾದರೂ ಮಾಡಬೇಕು ಎಂದು ಒತ್ತಾಯಿಸಿವೆ.
ಇನ್ನು 225 ಸದಸ್ಯಬಲ ಹೊಂದಿದ ಶ್ರೀಲಂಕಾ ಸಂಸತ್ತು ಜುಲೈ 20ರಂದು ಅಧ್ಯಕ್ಷರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಲಿದೆ. ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಹಾಲಿ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆಯವರ ಹೆಸರೂ ಕೇಳಿಬಂದಿದೆ.